ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವತಿಯಿಂದ ಧಾರ್ಮಿಕ ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹ ಅಭಿಯಾನವನ್ನು ಆ.12 ರಂದು ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ.
ಈಗಾಗಲೇ ಹಲವು ದಾನಿಗಳು ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕಗಳನ್ನು ನೀಡಿರುತ್ತಾರೆ. ಸುಮಾರು ಒಂದು ಸಾವಿರದಷ್ಟು ಪುಸ್ತಕಗಳು ಸಂಗ್ರಹವಾದ ಕೂಡಲೇ ವ್ಯವಸ್ಥಿತವಾಗಿ ಈ ಪುಸ್ತಕಗಳನ್ನು ಅಪೇಕ್ಷಿತ ಭಗವದ್ಭಕ್ತರಿಗೆ ಓದಲು ಅನುಕೂಲ ಕಲ್ಪಿಸಿಕೊಡಲು ವ್ಯವಸ್ಥಾಪನಾ ಸಮಿತಿಯು ನಿರ್ಧರಿಸಿದೆ.
ಶ್ರೀ ಮಹಾಲಿಂಗೇಶ್ವರನ ಭಕ್ತಾದಿಗಳು ತಮ್ಮ ಮನೆಯಲ್ಲಿ ಸಂಗ್ರಹವಾಗಿರುವ ಧಾರ್ಮಿಕ, ನೈತಿಕ, ಸಾಮಾಜಿಕ, ವೈಜ್ಞಾನಿಕ, ಐತಿಹಾಸಿಕ, ಸಾಹಿತ್ಯಕ, ಪೌರಾಣಿಕ ಮುಂತಾದ ಪುಸ್ತಕಗಳನ್ನು ತಮ್ಮ
ಕೊಡುಗೆಯಾಗಿ ನೀಡಿ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲು ಸಹಕರಿಸಬೇಕಾಗಿ ದೇವಳದ ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಪುಸ್ತಕಗಳನ್ನು ಖರೀದಿಸಿ ನೀಡುವರೇ ಅವಕಾಶವಿದೆ. ಓದುಗರಿಗೆ ಅವಕಾಶವನ್ನು ಕಲ್ಪಿಸುವ ಸಲುವಾಗಿ ತಮ್ಮ ಸದಸ್ಯತನವನ್ನು ನೋಂದಾಯಿಸಲು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ನೀಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಐತಪ್ಪ ನಾಯ್ಕ (ಮೊ: 9449030872) ಹಾಗೂ ದೇವಳದ ಕಚೇರಿಯನ್ನು (08251-230511) ಸಂಪರ್ಕಿಸಬಹುದು ಎಂದು
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿಯವರು ತಿಳಿಸಿದ್ದಾರೆ.