ಉಪ್ಪಿನಂಗಡಿ: ಹಳೇಗೇಟು ಬಳಿ ಮೀನು ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ಆ.22ರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆ ವರದಿಯಾಗಿದ್ದು, ಈ ಕೃತ್ಯವನ್ನು ಎಸಗಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿದದಿದ್ದಲ್ಲಿ ರಸ್ತೆ ರೋಕೋ ಪ್ರತಿಭಟನೆ ನಡೆಸುವುದಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನಿನ್ನೆ ಕರೆಕೊಟ್ಟಿದ್ದರು, ಈ ಹಿನ್ನೆಲೆಯಲ್ಲಿ ಇಂದು ಉಪ್ಪಿನಂಗಡಿಯಲ್ಲಿ ಕಾರ್ಯಕರ್ತರು ಒಟ್ಟುಗೂಡಿಕೊಂಡು ‘ರಸ್ತೆ ರೋಕೋ’ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆಯ ಮನವಿ ಮೇರೆಗೆ ಆರೋಪಿಗಳನ್ನು ಬಂಧಿಸಲು ಗುರುವಾರದವರೆಗೆ ಗಡುವು ನೀಡಲಾಗಿದೆ. ಗುರುವಾರ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಶುಕ್ರವಾರ ಉಪ್ಪಿನಂಗಡಿ ಬಂದ್ ಗೆ ನಿರ್ಧಾರ ಮಾಡಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ನಾವೂ ಗುರುವಾರ ರಾತ್ರಿವರೆಗೆ ಕಾಲಾವಕಾಶವನ್ನು ನೀಡುತ್ತಿದ್ದೇವೆ. ನೀವೂ ಇಂದು ರಾತ್ರಿ ಬಂಧನ ನಡೆಸಿದರು ನಮಗೆ ಸಂತೋಷವೇ ಒಂದು ವೇಳೆ ಗುರುವಾರ ರಾತ್ರಿಯವರೆಗೆ ಬಂಧನವಾಗದಿದ್ದಲ್ಲಿ ಮುಂದೆ ಆಗುವ ಎಲ್ಲಾ ಬೆಳವಣಿಗೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ಕಾರಣವಾಗುತ್ತದೆ ಎಂದರು.
ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ, ಗುರುವಾರ ಸಂಜೆಯ ತನಕ ನಾವು ಕಾಲಾವಕಾಶವನ್ನು ಕೊಡುತ್ತಿದ್ದೇವೆ,ಗುರುವಾರ ಸಂಜೆಯೊಳಗೆ ಯಾವುದೇ ಆರೋಪಿಗಳ ಬಂಧನವಾಗದಿದ್ದಲ್ಲಿ ಶುಕ್ರವಾರ ಉಪ್ಪಿನಂಗಡಿ ಬಂದ್ ಮಾಡಿ ಉಗ್ರವಾದಂತಹ ರೀತಿಯ ಪ್ರತಿಭಟನೆ ನಡೆಸಲಾಗುವುದು, ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿಂ.ಜಾ.ವೇ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಪ್ರಶಾಂತ್ ಕೆಂಪುಗುಡ್ಡೆ, ಜಯಂತ್ ಆಲಂಕಾರು, ಮಲ್ಲೇಶ್, ಉದ್ಯಮಿ ಯು ರಾಮ, ಸಂದೀಪ್ ರೈ,ಅಂಗಡಿ ಮಾಲಕ ಅಶೋಕ್ ಶೆಟ್ಟಿ, ರವೀಂದ್ರ ತೆಕ್ಕಾರು, ಜಿತೇಶ್ ಕಾಜೆಕ್ಕಾರು ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.