ಕಡಬ: ಐತ್ತೂರು ಗ್ರಾಮದ ಮಲೆಕ್ಕಾಯಿ ಎಂಬಲ್ಲಿ ವ್ಯಕ್ತಿಯೋರ್ವರು ಸ್ಥಳೀಯ ಮನೆಗೆ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಿರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ ಘಟನೆ ಆ.29ರಂದು ನಡೆದಿದೆ.
ಐತ್ತೂರು ಗ್ರಾಮದ ಮಲೆಕ್ಕಾಯಿ ನಿವಾಸಿ ಮಾಣಿ ಎಂಬವರು ಸ್ಥಳೀಯ ನಿವಾಸಿ ಪೂವಪ್ಪ ಗೌಡ ಎಂಬವರ ಮನೆಗೆ ಸಂಪರ್ಕಿಸುವ ಏಕೈಕ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಕಣಿ ತೆಗೆದು ಬಂದ್ ಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪೂವಪ್ಪ ಗೌಡರವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ ಬಂದ್ ಆಗಿದ್ದ ರಸ್ತೆ ತೆರವಿಗೆ ತಹಸೀಲ್ದಾರ್ ಆದೇಶ ಮಾಡಿದ್ದರು:
ಈ ಹಿಂದೆ ಇದೇ ವ್ಯಕ್ತಿ ಪೂವಪ್ಪ ಗೌಡರ ರಸ್ತೆಯನ್ನು ಬಂದ್ ಮಾಡಿದ್ದು ಬಳಿಕ ಪೂವಪ್ಪಗೌಡರು ಪುತ್ತೂರು ಸಹಾಯಕ ಕಮೀಷನರ್ ಅವರಿಗೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ 29-01-2021ರಂದು ಕಡಬ ತಹಸೀಲ್ದಾರ್ ರಸ್ತೆ ತೆರವುಗೊಳಿಸಲು ಆದೇಶ ಮಾಡಿದ್ದು ಬಳಿಕ ಈ ರಸ್ತೆಯನ್ನು ಕಂದಾಯ ನಿರೀಕ್ಷಕರು ತೆರವುಗೊಳಿಸಿ ಸಂಚಾರಕ್ಕೆ ಮುಕ್ತವಾಗಿರಿಸಿದ್ದರು.
ಆದರೆ ಆ.29ರಂದು ಬೆಳಿಗ್ಗೆ ಏಕಾಏಕಿ ಆಗಮಿಸಿದ ಮಾಣಿ ಅವರು ನಮ್ಮ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಕಣಿ ತೆಗೆದು ಬಂದ್ ಮಾಡಿದ್ದಾರೆ, ಈ ವೇಳೆ ನಾನು ಹಾಗೂ ನನ್ನ ಪತ್ನಿ ಅಲ್ಲಿಗೆ ಹೋದಾಗ ಮಾಣಿಯವರು ನಮಗೆ ಬೆದರಿಕೆಯನ್ನುಒಡ್ಡಿದ್ದು ಇನ್ನು ಮುಂದೆ ಈ ದಾರಿಯಲ್ಲಿ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಕಡಿದು ಹಾಕುತ್ತೇನೆ ಎಂದು ಹೇಳಿದ್ದಾರೆ, ನಮಗೆ ಮನೆಯಿಂದ ಹೊರ ಹೋಗಬೇಕಾದರೆ ಇದೊಂದೆ ದಾರಿ ಇದ್ದು ಈ ರಸ್ತೆಯನ್ನು ಬಂದ್ ಮಾಡಿರುವುದರಿಂದ ನಮಗೆ ತೊಂದರೆ ಆಗಿದೆ, ಬಂದ್ ಮಾಡಿರುವ ರಸ್ತೆಯನ್ನು ಪುನಃ ತೆರವುಗೊಳಿಸಬೇಕೆಂದು ಅವರು ಪೊಲೀಸರಲ್ಲಿ ವಿನಂತಿಸಿ ದೂರು ನೀಡಿದ್ದಾರೆ.