ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ.
40 ವರ್ಷದ ಸಿದ್ಧಾರ್ಥ್ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಬಳಿಕ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಇವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಹಿಂದಿಯ ಜನಪ್ರಿಯ ಧಾರಾವಾಹಿ ‘ಬಾಲಿಕಾ ವಧು’ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದ ಸಿದ್ಧಾರ್ಥ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇತ್ತೀಚೆಗಷ್ಟೇ ನಡೆದಿದ್ದ ರಿಯಾಲಿಟಿ ಶೋಗಳಾದ ಬಿಗ್ ಬಾಸ್ ಒಟಿಟಿ ಹಾಗೂ ಡಾನ್ಸ್ ದಿವಾನೆ 3ರಲ್ಲೂ ಕಾಣಿಸಿಕೊಂಡಿದ್ದರು. ಹೀಗಿರುವಾಗ ಸಿದ್ಧಾರ್ಥ್ ಶುಕ್ಲಾರವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.





























