ವಿಟ್ಲ: ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ದಡಿಯಲ್ಲಿ ‘ಪೌಷ್ಟಿಕ ಆಹಾರ ಮಾಸಾಚರಣೆ’ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಗಜ್ಜೀವನ್ ರಾಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರಂಭದಲ್ಲಿ ಮಕ್ಕಳಿಂದ ಯೋಗ ಶಿಬಿರದ ಪ್ರಾತ್ಯಕ್ಷಿತೆ ನೀಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸೋಮಕ್ಕ ರವರು ಇಲಾಖೆ ಕುರಿತು, ಪೋಷಣ್ ಅಭಿಯಾನದ ಕುರಿತು ಸವಿಸ್ತಾರವಾದಂತಹ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳ ಸಾಂತ್ವನ ಕೇಂದ್ರದ ಶ್ರೀಮತಿ ಗೀತಾಶ್ರೀ ರವರು ಮಕ್ಕಳ ಶೈಕ್ಷಣಿಕತೆಯಲ್ಲಿ ಕೊರೊನಾದ ಪ್ರಭಾವ ಆನ್ ಲೈನ್ ಶಿಕ್ಷಣದ ಸಾಧಕ- ಭಾದಕಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು.ಕಿಶೋರ- ಕಿಶೋರಿಯರಿಗೆ ಮಾಹಿತಿ ಕಾರ್ಯಾಗಾರ ನಡೆಸಿ ಕೊಟ್ಟರು. ಆರೋಗ್ಯ ಇಲಾಖಾ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಮಮತಾ, ಪೌಷ್ಟಿಕ ಆಹಾರ, ಆರೋಗ್ಯ ಹಾಗೂ ಕೊರೊನಾದ ಬಗ್ಗೆ, ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವ ವಿವಿಧ ಬಗೆಯ 23 ತಿನಸುಗಳನ್ನು ತಾಯಂದಿರು ತಯಾರಿಸಿ ಪ್ರದರ್ಶನಕ್ಕಿಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಮೋಹಿನಿ, ಬಾ. ವಿ. ಸ ಅಧ್ಯಕ್ಷೆ ಶಶಿಕಲಾ, ಆಶಾಕಾರ್ಯಕರ್ತೆಯರಾದ ಕಮಲ, ಚಂದ್ರಾವತಿ, ಮಕ್ಕಳ ತಾಯಂದಿರು, ಸ್ತ್ರೀ ಶಕ್ತಿ ಸದಸ್ಯೆಯರು, ಕಿಶೋರ-ಕಿಶೋರಿಯರು, ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕರ್ತೆ ಲಕ್ಷ್ಮಿ ಭಟ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ವಂದಿಸಿದರು.ಗೀತಾಂಜಲಿ ಸಹಕರಿಸಿದರು.