ನೆಲ್ಯಾಡಿ: ಇಂದು ಬೆಳಿಗ್ಗೆಯಷ್ಟೇ ಪೋಸ್ಟರ್ ಬಿಡುಗಡೆಗೊಳಿಸಿ ಪುತ್ತೂರಿನಿಂದ ತಂಡವಾಗಿ ಬೈಕ್ ರೈಡಿಂಗ್ ಗೆ ತೆರಳಿದ ತಂಡ ಸರಣಿ ಅಪಘಾತಕ್ಕೆ ತುತ್ತಾಗಿ ಒಬ್ಬರು ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಎಂಜಿರ ಬಳಿ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಸೆ. 6 ರಂದು ಮಧ್ಯಾಹ್ನ ನಡೆದಿದೆ. ಮೃತ ಯುವಕನನ್ನು ಪುತ್ತೂರಿನ ಕೌಡಿಚ್ಚಾರ್ ಸಿಆರ್ ಸಿ ಕಾಲೋನಿ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ -75ರ ನೆಲ್ಯಾಡಿ ಸಮೀಪದ ರೆಖ್ಯ ಗ್ರಾಮದ ಎಂಜಿರ ಬಳಿ ಇಂದು ಮದ್ಯಾಹ್ನ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಡಾರ್ಕ್ ರೈಡರ್ ಎಂಬ ಈ ನೂತನ ತಂಡದ ಎರಡು ಬೈಕ್ ಗಳು ಅಪಘಾತಕ್ಕಿಡಾಗಿವೆ. ಮೊದಲ ಅಪಘಾತದಲ್ಲಿ ಬೈಕ್ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟರೆ, ಅದೇ ತಂಡದ ಇನ್ನೊಂದು ಬೈಕ್ ಸ್ಕಿಡ್ ಆಗಿ ಅಪಘಾತಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
‘ಡಾರ್ಕ್ ರೈಡರ್ಸ್ ʼ ಎಂಬ ಈ ನೂತನ ಬೈಕ್ ರೈಡಿಂಗ್ ತಂಡವೂ ಇಂದು ಬೆಳಿಗ್ಗೆ ಪುತ್ತೂರಿನ ಹೊರವಲಯ ಕುಂಬ್ರದಲ್ಲಿ ತಮ್ಮ ತಂಡದ ಲಾಂಛನ ಬಿಡುಗಡೆಗೊಳಿಸಿ ಪಯಣ ಆರಂಭಿಸಿತು. ‘ಡಾರ್ಕ್ ರೈಡರ್ಸ್ ʼ ತಂಡದಲ್ಲಿ ಕುಂಬ್ರ, ಅರಿಯಡ್ಕ, ಶೇಖಮಲೆ ಹಾಗೂ ಅಸುಪಾಸಿನ ಸ್ಥಳೀಯ ಹಾಗೂ ಯುವಕರು ಇದ್ದರು ಎಂದು ತಿಳಿದು ಬಂದಿದೆ.
ಪೊಸ್ಟರ್ ಬಿಡುಗಡೆ ಬಳಿಕ ಆ ತಂಡವೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ತೆರಳಿತ್ತು. ತಂಡವೂ ಅಲ್ಲಿಂದ ಉಪ್ಪಿನಂಗಡಿ ಮೂಲಕ ಸಕಲೇಶಪುರಕ್ಕೆ ತಮ್ಮ ರೈಡಿಂಗ್ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ದುರದೃಷ್ಟವಶಾತ್ ಮೊದಲ ಪ್ರಯತ್ನದಲ್ಲೆ ತಂಡದ ಎರಡು ಬೈಕ್ ಅಪಘಾತಕ್ಕೆ ಈಡಾಗಿದೆ.
ಅಪಘಾತದಲ್ಲಿ ಮನೋಜ್(20)ಮೃತ ಪಟ್ಟರೇ, ಚೇತನ್ (20) ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಇನ್ನೊಬ್ಬ ಯುವಕ ಸಚಿನ್ ಕೂಡ ಕಾಲು ಮುರಿತಕ್ಕೆ ಒಳಗಾಗಿದ್ದು ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 11.30 ರ ಸುಮಾರಿಗೆ ಪುತ್ತೂರಿನ ಮಹಾಲೀಂಗೇಶ್ವರ ದೇವಸ್ಥಾನದಿಂದ ಈ ತಂಡ ರೈಡಿಂಗ್ ಹೊರಟಿದೆ. ಅವುಗಳ ಪೈಕಿ ಮನೋಜ್ ಚಲಾಯಿಸುತ್ತಿದ್ದ ಕೆಟಿಎಂ ಬೈಕ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಜಿರ ಸಮೀಪ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಹೊಸ ವಾಹನಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವೇಗದ ಚಾಲನೆಯಿಂದಾಗಿ ಅಪಘಾತವಾಗಿದ್ದು ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟ ಯುವಕನ ಮೈಮೇಲೆ ಕಂಟೇನರ್ ಲಾರಿ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮತ್ತೊಂದು ಅಪಘಾತ:
ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ಈತನ ತಂಡದ ಇತರ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಗುಂಡ್ಯ ತಲುಪಿದ್ದ ಅವರು ವಾಪಸ್ಸು ಅಪಘಾತ ನಡೆದ ಸ್ತಳಕ್ಕೆ ಬರಲು ತಿರುಗಿದ್ದಾರೆ. ಹೀಗೆ ವಾಪಸ್ಸು ಆಗುತ್ತಿದ್ದ ವೇಳೆ ತಂಡದ ಸದಸ್ಯನೊಬ್ಬ ಚಲಾಯಿಸುತ್ತಿದ್ದ ಬೈಕ್ ಕೂಡ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮೃತ ಮನೋಜ್ ಮೃತ ದೇಹವನ್ನೂ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಅಪಘಾತವೂ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮನೋಜ್
ಇಂದು ಸಕಲೇಶಪುರ ಕ್ಕೆ ಹೊರಟ ತಂಡ