ಮಂಗಳೂರು: ಕರಾವಳಿ ಚಾಲಿ ಬಿಳಿ ಹೊಸ ಅಡಕೆ ಬೆಲೆ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ.
ಅಡಿಕೆಯ ಇತಿಹಾಸದಲ್ಲೆ ಮೊದಲ ಬಾರಿಗೆ ಹೊಸ ಅಡಿಕೆಗೆ 500 ರೂಪಾಯಿ ಧಾರಣೆ ಸಿಕ್ಕಿದೆ. ವಿಟ್ಲದಲ್ಲಿ ರೂ 500 ಕ್ಕೆ ಕೆಜಿ ಅಡಿಕೆಯನ್ನು ವ್ಯಾಪರಿಗಳು ಖರೀದಿಸಿದ್ದಾರೆ . ಜಿಲ್ಲೆಯ ಉಳಿದ ಕಡೆ ಖಾಸಗಿ ವಲಯದಲ್ಲಿ ಕೆಜಿಗೆ 490ರಿಂದ 495 ರೂ. ವರೆಗೆ ಖರೀದಿ ನಡೆದಿದ್ದು, ಈ ಮೂಲಕ ಗರಿಷ್ಠ ಬೆಲೆ ದಾಖಲಾಗಿದೆ.
ಚೌತಿ ಹಬ್ಬ ಮುಗಿಯುತ್ತಲೇ ಮಾರುಕಟ್ಟೆಯಲ್ಲಿ ಹೊಸ ಅಡಕೆ ಆವಕ ತೀರಾ ಕಡಿಮೆಯಾಗಿದೆ. ಈಗ ಹೊಸ ಅಡಕೆ ಎಂದು ಮಾರುಕಟ್ಟೆಯಲ್ಲಿ ಖರೀದಿಯಾಗುವ ಅಡಕೆ ಕಳೆದ ಸಾಲಿನ ಕೊಯ್ಲಿನ ಅಡಕೆಯಾಗಿದೆ. ಇನ್ನೊಂದು ತಿಂಗಳಿನಲ್ಲಿ ಈ ಅಡಕೆ ಹಳೆ ಅಡಕೆಯಾಗಿ ಪರಿಗಣಿಸಲ್ಪಡಲಿದೆ. ಈ ಹಿನ್ನೆಲೆಯಲ್ಲಿ ಈಗ ಬೆಳೆಗಾರರು ಅಡಕೆ ಮಾರಲು ಮುಂದಾಗುತ್ತಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಏರು ಮುಖದತ್ತ ಸಾಗುತ್ತಿದೆ.
ಈ ನಡುವೆ ಹಳೆ ಅಡಕೆ ಬೆಲೆ ಯತಾಸ್ಥಿತಿಯಲ್ಲಿ ಮುಂದುವರಿದಿದ್ದು, ಒಂದು ಕೆಜಿಗೆ 500 ರೂ. ನಿಂದ 510 ರೂ. ವರೆಗೆ ಖರೀದಿಯಾಗುತ್ತಿದೆ. ಅಲ್ಲದೆ ಈ ಸಾಲಿನ ಕೊಯ್ಲಿನ ಹೊಸ ಅಡಕೆಯೂ ಮಾರುಕಟ್ಟೆಗೆ ಬರುತ್ತಿದ್ದು, 430 ರೂ. ನಿಂದ 440 ರೂ. ವರೆಗೆ ಖರೀದಿಯಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಕ್ಯಾಂಪ್ಕೊದಲ್ಲಿ ಮಂಗಳವಾರ ಹೊಸ ಅಡಿಕೆಗೆ 410-480. ಹಳೇ ಅಡಿಕೆಗೆ 480-505 ಹಾಗೂ ಡಬಲ್ ಚೋರ್ 480-505 ರೂಪಾಯಿಗೆ ಖರೀದಿಸಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ರೂ 35 ರವರೆಗೆ ಏರಿಕೆಯಾಗಿದೆ. ಇನ್ನಷ್ಟು ಏರಿಕೆಯಾಗುವ ದಟ್ಟ ಲಕ್ಷಣಗಳು ಕಾಣಿಸುತ್ತಿವೆ.