ಮಂಗಳೂರು: ಒಂದು ವಾರದ ಅವಧಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ದಟ್ಟ ಅರಣ್ಯದ ಕೆಲವು ಪ್ರದೇಶಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವ ಮಾಹಿತಿ ಗುಪ್ತಚರ ಅಧಿಕಾರಿಗಳಿಗೆ ಲಭಿಸಿದೆ. ಇಲ್ಲಿಂದ ವಿದೇಶಕ್ಕೆ ಕರೆ ಸಂಪರ್ಕ ಆಗಿರುವುದನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತುರಾಯಾ ಸ್ಯಾಟಲೈಟ್ ಫೋನ್ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ರಾಜ್ಯದ ಕರಾವಳಿಯಲ್ಲಿ ಈ ಫೋನ್ ಸಂಪರ್ಕ ಆಗಿರುವುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಇತ್ತೀಚೆಗೆ ಶ್ರೀಲಂಕಾದಿಂದ ಐಎಸ್ ಪ್ರೇರಿತ ಶಂಕಿತ ಉಗ್ರರು ಭಾರತದ ಕರಾವಳಿಗೆ ನುಸುಳಿದ್ದಾರೆ ಎಂದು ಸುದ್ದಿಯಾಗಿತ್ತು.ಈ ಕಾರಣದಿಂದ ಕೇಂದ್ರ ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರದ ಸೂಚನೆ ಬಂದಿತ್ತು.
ಇದರ ಬೆನ್ನಲ್ಲೇ ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯಲ್ಲಿ ಸದ್ದುಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಅರಣ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಫೋನ್ ಸಂಪರ್ಕವಾಗಿರುವುದು ಗೊತ್ತಾಗಿದೆ. ತುರಾಯಾ ಫೋನ್ ಅನ್ನು ಬಳಸಿದವರು ಯಾರು, ಅದರ ಮೂಲಕ ಯಾರನ್ನು ಸಂಪರ್ಕಿಸಲಾಗಿದೆ ಎಂಬುದನ್ನು ಖಚಿತವಾಗಿ ಪತ್ತೆ ಮಾಡಲು ಆಗದು. ಹೀಗಾಗಿ ಈ ಫೋನ್ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧಿಸಲಾಗಿದೆ. ಈ ಫೋನ್ ಬಳಕೆಯಾಗಿ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತದೆ ಎಂದು ಮೂಲಗಳು ತಿಳಿಸಿವೆ.