ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಸಂಭ್ರಮವನ್ನು ಆಚರಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಜಿಲ್ಲಾ ಬಿಜೆಪಿ ಸದಸ್ಯರ ನೇತೃತ್ವದಲ್ಲಿ ಆಶ್ರಮಕ್ಕೆ ಭೇಟಿಯಿತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಿ ಆಶ್ರಮವಾಸಿಗಳಿಗೆ ಮಧ್ಯಾಹ್ನದ ಊಟವನ್ನು ಉಣಬಡಿಸಿದರು.
ಆಶ್ರಮದ ಎಲ್ಲಾ ಸದಸ್ಯರಿಗೂ ಹೊಸಬಟ್ಟೆಬರೆಗಳನ್ನು ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಮಾತನಾಡಿ, ಬಡಜನತೆಯ ಸೇವೆಯನ್ನು ಮಾಡುವ ಮೂಲಕ ತನ್ನ ಜನ್ಮದಿನಾಚರಣೆಯನ್ನು ಆಚರಿಸಬೇಕೆಂಬ ಪ್ರಧಾನಿಯವರ ಆಶಯದಂತೆ ಮುಂದುವರಿಯುವುದು ಕಾರ್ಯಕರ್ತರ ಕರ್ತವ್ಯವಾಗಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಭಾರತವು ಸುಧಾರಣೆಯತ್ತ ಸಾಗುತ್ತಿದೆ ಎಂದು ತಿಳಿಸಿದ ಅವರು ಆಶ್ರಮಕ್ಕೆ ಅಗತ್ಯವುಳ್ಳ ಎಲ್ಲಾ ನೆರವುಗಳನ್ನು ನೀಡಲು ಪಕ್ಷವು ಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಕೆ.ರಘುನಾಥ್, ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್, ನೇತಾರರಾದ ಪ್ರಮೀಳಾ ಸಿ.ನಾಯಕ್, ಎಂ.ಸುಧಾಮ ಗೋಸಾಡ, ಈಶ್ವರ ಮಾಸ್ತರ್ ಪೆರಡಾಲ, ಹರೀಶ್ ನಾರಂಪಾಡಿ, ಪಿ.ರಮೇಶ್, ಸುನಿಲ್ ಪಿ.ಆರ್., ಸುಕುಮಾರ ಕುದ್ರೆಪ್ಪಾಡಿ, ಜಯದೇವ ಖಂಡಿಗೆ, ಕೆ.ಎನ್.ಕೃಷ್ಣ ಭಟ್, ಅಶ್ವಿನಿ ಮೊಳೆಯಾರು, ಸವಿತಾ ಟೀಚರ್, ಶಿವಶಂಕರ ಭಟ್ ಗುಣಾಜೆ, ಆಶ್ರಮದ ಸಂಘಟಕರು ಮೊದಲಾದವರು ಉಪಸ್ಥಿತರಿದ್ದರು.