ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತ್ರಿಕೆಯೊಂದರ ಸಂಪಾದಕ ಹಲ್ಲೆಗೆರೆ ಶಂಕರ್ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ. 9 ತಿಂಗಳ ಮಗು ಆಹಾರವಿಲ್ಲದೇ ಸಾವನ್ನಪ್ಪಿದೆ. ಈ ಘಟನೆಯಿಂದ ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರ ಪೈಕಿ ಸಿಂಧೂರಾಣಿ ಎಂಬುವವರು ತಮ್ಮ 9 ತಿಂಗಳ ಮಗುವಿಗೆ ಹಾಲುಣಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೋರ್ವ ಮಗಳು ಪ್ರೇಕ್ಷಾಳಿಗೆ ಊಟ ತಿನ್ನಿಸಿ ಮಲಗಿಸಿದ್ದಾರೆ. ನಂತರ ಅಮ್ಮ ಭಾರತಿ, ಮಕ್ಕಳಾದ ಸಿಂಚನ, ಸಿಂಧೂರಾಣಿ ಹಾಗೂ ಮಧುಸಾಗರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಎಲ್ಲರೂ ಪ್ರತ್ಯೇಕ ರೂಮ್ ಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿದ್ದೆಯಿಂದ ಎದ್ದ ಒಂಭತ್ತು ತಿಂಗಳ ಗಂಡುಮಗು ಅಳುವುದಕ್ಕೆ ಶುರು ಮಾಡಿದೆ.. ಹಸಿವಿನಿಂದ ಸಾಕಷ್ಟು ಹೊತ್ತು ಮಗು ಅತ್ತಿದೆ ಎಂದು ಹೇಳಲಾಗಿದೆ.ಮತ್ತೊಂದು ಮಗು ಪ್ರೇಕ್ಷ ಕೂಡ ನಿದ್ದೆಯಿಂದ ಎದ್ದು ಅಳುವುದಕ್ಕೆ ಶುರು ಮಾಡಿದೆ.. ಬಂಗಲೆ ಸೌಂಡ್ ಫ್ರೂಫ್ ಇದ್ದ ಕಾರಣ ಮಕ್ಕಳ ಆಕ್ರಂದನ ಯಾರಿಗೂ ಕೇಳಿಸಿಲ್ಲ. 9 ತಿಂಗಳ ಹಸುಗೂಸು ಹಾಲಿಲ್ಲದೆ ಅತ್ತು ಅತ್ತು ಪ್ರಾಣ ಬಿಟ್ಟಿದೆ ಎಂದು ಹೇಳಲಾಗಿದೆ.
ಇತ್ತ ಎರಡೂವರೆ ವರ್ಷದ ಪ್ರೇಕ್ಷ ಪ್ರತಿಯೊಬ್ಬರ ರೂಂ ಬಳಿ ಹೋಗಿ ಅತ್ತಿದ್ದಾಳೆ.. ಐದು ದಿನಗಳ ಕಾಲ ಅನ್ನ ನೀರಿಲ್ಲದೆ ಕಾಲ ಕಳೆದಿದ್ದಾಳೆ ಪ್ರೇಕ್ಷ. ಕತ್ತಲಲ್ಲಿ, ಎಲ್ಲರ ಮೃತದೇಹಗಳ ಬಳಿ ಹೋಗಿ ಅತ್ತಿದ್ದಾಳೆ. ಮೃತದೇಹಗಳಿಂದ ಹುಳುಗಳು ಹೊರಬಂದು ಕೆಟ್ಟ ವಾಸನೆ ಬರಲು ಆರಂಭಿಸಿದೆ. ಒಂದು ಕಡೆ ವಾಸನೆ , ಮತ್ತೊಂದು ಕಡೆ ಮೃತದೇಹದಿಂದ ಹೊರ ಬರ್ತಿರೊ ಹುಳುಗಳ ಮಧ್ಯೆ ಪ್ರೇಕ್ಷ ಜೀವನ ನಡೆಸಿದ್ದಾಳೆ. ಹೊಟ್ಟೆ ಹಸಿವು, ಅನ್ನ ನೀರಿಲ್ಲದೆ ಭಯದಲ್ಲೇ ಐದು ದಿನಗಳ ಕಾಲ ಹೋರಾಟ ನಡೆಸಿ ಕೊನೆಗೂ ಪ್ರೇಕ್ಷ ಬದುಕುಳಿದಿದ್ದಾಳೆ.