ಮಂಜೇಶ್ವರ: ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಜೇಶ್ವರದ ಕುಂಬಳೆಯಲ್ಲಿ ನಡೆದಿದೆ.
ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಚಂದ್ರಹಾಸ ಎಂಬವರ ಪುತ್ರಿ ಸ್ನೇಹಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.
ಆಕೆ ಬರೆದ ಪತ್ರವೊಂದು ಆಕೆಯ ಕೋಣೆಯಲ್ಲಿ ಪೊಲೀಸರಿಗೆ ಲಭಿಸಿದೆ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದ ಸ್ನೇಹಾ ಕೆಲ ಸಮಯದ ಬಳಿಕ ಕೋಣೆಯೊಳಗೆ ತೆರಳಿದ್ದು, ರಾತ್ರಿ ಸುಮಾರು 7 ಗಂಟೆ ಕಳೆದರೂ ಕೋಣೆಯಿಂದ ಹೊರ ಬರದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಬಾಗಿಲು ಬಡಿದರೂ ತೆರೆಯಲಿಲ್ಲ. ಕೊನೆಗೆ ಹಿಂಬದಿಯ ಕಿಟಿಕಿ ಗಾಜು ಒಡೆದು ನೋಡಿದಾಗ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕೂಡಲೇ ಮನೆಯವರು ಬಾಗಿಲು ಮುರಿದು ಕೆಳಗಿಳಿಸಿ ಕುಂಬಳೆಯ ಆಸ್ಪತ್ರೆಗೆ ಕೊಂಡೊಯ್ದರಾದರೂ ಆಕೆ ಆಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಕೋಣೆಯಿಂದ ಲಭಿಸಿದ ಪತ್ರ ಹಾಗೂ ಸ್ನೇಹಾಳ ಮೊಬೈಲ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.