ತೊಕ್ಕೊಟ್ಟು: ಉಳ್ಳಾಲ ಮಾಸ್ತಿಕಟ್ಟೆ ಕುಮೇರು ಪಾಡಾಂಗರ ಪೂಮಾಲೆ ಶ್ರೀ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಪಂಚಲೋಹದ ಮೊಗ ಭಾನುವಾರ ತಡರಾತ್ರಿ ಕಳ್ಳತನವಾಗಿದೆ.
ಅಣ್ಣಪ್ಪ ದೈವದ ಗುಡಿಯ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಪಂಚಲೋಹದ ಮೊಗವನ್ನು ಕದ್ದು ಕದ್ದೊಯ್ಯಿದಿದ್ದಾರೆ.. ಗುಡಿಯ ಪಕ್ಕದ ನಿವಾಸಿ ನವೀನ್ ಡಿ.ಕುಟ್ಟಪ್ಪ ಸೋಮವಾರ ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಅಣ್ಣಪ್ಪನ ಗುಡಿಯ ಬಾಗಿಲು ತೆರೆದಿರುವುದನ್ನ ಕಂಡಿದ್ದಾರೆ. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳರು ಗುಡಿಯ ಒಳಗಿದ್ದ ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಪಂಚ ಲೋಹದ ಮೊಗವನ್ನು ಮಾತ್ರ ಎಗರಿಸಿ ಅಲ್ಲಿದ್ದ ಪ್ರಭಾವಳಿ, ಬೆಳ್ಳಿ ಮತ್ತು ಲೋಹದ ಕಡ್ಸಲೆ ಇತರ ದೈವೀ ಪರಿಕರಗಳನ್ನು ಬಿಟ್ಟು ಹೋಗಿದ್ದಾರೆ. ಸ್ವತ: ನವೀನ್ ಡಿ. ಕುಟ್ಟಪ್ಪ ನವರೇ ಈ ಮೊಗವನ್ನು ಅಣ್ಣಪ್ಪ ದೈವಕ್ಕೆ ನೀಡಿದ್ದರು.
ಪ್ರಾಂಗಣದಲ್ಲಿರುವ ಪಾಡಂಗರ ಶ್ರೀ ಭಗವತಿ ಗುಡಿಯ ಬಾಗಿಲ ಬೀಗವನ್ನು ಮುರಿಯಲು ಪ್ರಯತ್ನಿಸಿ ವಿಫಲವಾಗಿದ್ದು ಕಂಡುಬಂದಿದೆ. ಶ್ರೀ ಭಗವತೀ ಕ್ಷೇತ್ರ ಮಾಸ್ತಿಕಟ್ಟೆ ಜಂಕ್ಷನ್‌ನಲ್ಲಿರುವ ತೀಯಾ ಸಮಾಜ ಕುಟುಂಬಸ್ಥರ ಆರಾಧ್ಯ ಕ್ಷೇತ್ರವಾಗಿದೆ.
ದೈವಸ್ಥಾನದ ಮುಖ್ಯ ಅರ್ಚಕ ಭುಜಂಗರವರು ಕಳ್ಳತನದ ಮಾಹಿತಿ ತಿಳಿಯುತ್ತಲೇ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೈವಸ್ಥಾನದ ಹತ್ತಿರದ ಜಾಗೃತ ವಿವಿಧೋದ್ದೇಶ ಸಂಘ ಸೇರಿದಂತೆ ಸ್ಥಳೀಯ ಅಂಗಡಿ ಮಳಿಗೆಗಳ ಸಿಸಿ ಟಿವಿ ಫೂಟೇಜ್ ತಪಾಸಣೆ ನಡೆಸುತ್ತಿದ್ದಾರೆ.
ಕ್ಷೇತ್ರದ ಪರಿವಾರ ದೈವ ನಾಗನ ಗುಡಿಯ ನಾಗನ ಕಲ್ಲನ್ನು ಈ ಹಿಂದೊಮ್ಮೆ ನಾಲ್ವರು ಅನ್ಯಮತೀಯರು ಸಮೀಪದ ಬಾವಿಗೆ ಎಸೆದಿದ್ದೂ, ಆ ನಾಲ್ವರ ಪೈಕಿ ಓರ್ವ ಮೃತ ಪಟ್ಟ ಹಾಗೂ ಇನ್ನುಳಿದವರು ಕಷ್ಟಕ್ಕೆ ತುತ್ತಾಗಿ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಸಲ್ಲಿಸಿದ ಬಗ್ಗೆ ಇಲ್ಲಿನ ಭಕ್ತರು ಮಾಹಿತಿ ನೀಡಿದ್ದಾರೆ. ಹಾಗೆಯೇ ಅಣ್ಣಪ್ಪ ದೈವ ಕಾರಣಿಕ ಶಕ್ತಿಯಾಗಿದ್ದು ಪಂಚಲೋಹದ ಮೊಗ ಕಳ್ಳರ ಮುಂದಿನ ಬದುಕು ದುರಂತಕ್ಕೆ ತಲುಪಿದಾಗ ಕ್ಷೇತ್ರದ ಕಾರಣಿಕ ಮನದಟ್ಟಾಗಲಿದೆ ಎಂದು ಅರ್ಚಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.