ಪುತ್ತೂರು: ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇದ್ದಾರೆ.. ಆನ್‌ಲೈನ್, ಡಿಜಿಟಲ್ ಮಾರುಕಟ್ಟೆಗಳು ಸಮಾಜಕ್ಕೆ ಎಷ್ಟು ಪ್ರೇರಕವೋ ಅಷ್ಟೇ ಮಾರಕವೂ ಹೌದು. ಇದೇ ಹೆಸರಿನಲ್ಲಿ ಅನೇಕ ಮೋಸಗಾರರು ಜನರನ್ನು ವಂಚಿಸುತ್ತಿರುವ ಕಥೆ ಇಂದು ನಿನ್ನೆಯದಲ್ಲ.. ಆನ್‌ಲೈನ್ ವ್ಯಾಪಾರ ಆರಂಭವಾದಾಗಿನಿಂದ ಇದೆ. ದಿನಂಪ್ರತಿ ಪತ್ರಿಕೆ, ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿವೆ. ಆದರೆ ಜನರು ಇನ್ನೂ ಮೋಸ ಹೋಗುತ್ತಲೇ ಇದ್ದಾರೆ.
‘ನ್ಯಾಪ್‌ಟಾಲ್’ ಆನ್ಲೈನ್ ಶಾಪಿಂಗ್ ಕಂಪೆನಿಯ ಹೆಸರಿನಲ್ಲಿ ನಿಮಗೊಂದು ಲಕ್ಕಿಕೂಪನ್ ಪೋಸ್ಟ್ ಲ್ಲಿ ಬರುತ್ತದೆ. ಅದರ ಜೊತೆಗೆ ಆ ಕೂಪನ್ ಒಡೆಯುವುದರಿಂದ ಹಿಡಿದು ಕಾರು ಬಂದು ನಿಮ್ಮ ಮನೆ ಬಾಗಿಲಲ್ಲಿ ನಿಲ್ಲುವ ತನಕದ ವಿವರಣೆ ಇರುವ ಪತ್ರ ಇರುತ್ತದೆ. ಕೂಪನ್ ನ್ನು ಸ್ಕ್ರ್ಯಾಚ್ ಮಾಡಿದಾಗ ಅದರಲ್ಲಿ ಸುಮಾರು 12 ಲಕ್ಷ ಮೌಲ್ಯದ ಕಾರು ಬಹುಮಾನವೋ, 10 ಲಕ್ಷ ರೂ. ನಗದು ಬಹುಮಾನ ಇತ್ಯಾದಿ ಬಹುಮಾನಗಳ ಸುರಿಮಳೆ ಸುರಿಸಿರುತ್ತಾರೆ. ಹೇಳಿ ಕೇಳಿ ನ್ಯಾಪ್‌ಟಾಲ್ ಹೆಸರಾಂತ ಆನ್‌ಲೈನ್ ಮಾರುಕಟ್ಟೆ ಕಂಪೆನಿ. ಇನ್ನು ರಿಜಿಸ್ಟರ್ ಪೋಸ್ಟ್ ಬೇರೆ.. ಅಬ್ಬಬ್ಬಾ ಯಾರಾದರೂ ನಂಬದೆ ಬಿಡುತ್ತಾರಾ..! ಹಾಗೊಂದು ವೇಳೆ ನಂಬಿಬಿಟ್ರಾ ಮುಂದಿನದು ಭಾರೀ ಸುಲಭ.. ಹಿಪ್ನೋಟಿಸಂ ಆದಂತೆ ನಿಮ್ಮೆಲ್ಲಾ ದಾಖಲೆಗಳು, ಗೌಪ್ಯ ಸಂಖ್ಯೆಗಳು, OTP ಇತ್ಯಾದಿಗಳು ಅನಿಯಂತ್ರಿತವಾಗಿ ಫೇಕ್ ಕಂಪೆನಿ ಕೈ ಸೇರುವಲ್ಲಿ ನಿಮ್ಮ ಪಾತ್ರ ಅಮೋಘವಾಗಿರುತ್ತದೆ..! ನಿಮಿಷಗಳಲ್ಲಿ ನಿಮ್ಮ ಖಾತೆಯಲ್ಲಿರುವ ಹಣ ಮೋಸಗಾರರ ಕೈ ಪಾಲಾಗಿರುತ್ತವೆ. ಎಚ್ಚರ..
4% ತೆರಿಗೆ ಮುಂಗಡ ಪಾವತಿಗೆ ವಿನಂತಿ
10 ಲಕ್ಷ, 12 ಲಕ್ಷ ಕ್ಕೂ ಅಧಿಕ ಮೌಲ್ಯದ ಕಾರು ಬಹುಮಾನವಾಗಿ ಸ್ಕ್ರ್ಯಾಚ್ ಕಾರ್ಡ್ ನಲ್ಲಿ ಬಂದಿದ್ದರೆ ಅದರ ಜೊತೆಗೆ ಇರುವ ಪತ್ರದಲ್ಲಿ ಕಾರಿನ ಮೌಲ್ಯದ 4% ತೆರಿಗೆಯನ್ನು ಮುಂಗಡ ಪಾವತಿಸುವಂತೆ ಸೂಚಿಸಲಾಗಿದೆ. ಅದರಲ್ಲೂ 1% ಮುಂಗಡ ಅಕೌಂಟ್ ಗೆ ಮತ್ತು ಉಳಿದ 3% ಬಹುಮಾನ ಡೆಲಿವರಿ ಸಮಯದಲ್ಲಿ ನೀಡುವಂತೆ ಸೂಚಿಸಲಾಗಿರುತ್ತದೆ. ಇಲ್ಲಿಯೂ ಜನರಿಗೆ ಪಕ್ಕಾ ನಂಬಿಕೆ ಬರುವಂತೆ ನಿಯಮಗಳನ್ನು ಹಾಕಲಾಗಿರುತ್ತದೆ. 1% ಅಲ್ವಾ ಎಂದು ನೀವು ಪಾವತಿಸಿದ್ರಾ ಅಲ್ಲಿಗೆ ಮುಗಿತು. 10 ಲಕ್ಷ ಮೌಲ್ಯದ ಕಾರಿನ 1% ಅಂದರೂ 10,000 ರೂ. ನಿಮ್ಮ ಪಂಗನಾಮವೇ ಆಗಿರುತ್ತದೆ.
ನ್ಯಾಪ್‌ಟಾಲ್.ಕಾಂ ಕಂಪೆನಿಯಿಂದ ಅಧಿಕೃತ ಎಚ್ಚರಿಕೆ
ನ್ಯಾಪ್‌ಟಾಲ್ ಕಂಪೆನಿ ಹೆಸರಿನಲ್ಲಿ ಹೀಗೊಂದು ಮೋಸಗಾರಿಕೆ ನಡೆಯುತ್ತಿದೆ ಎಂದು ಈಗಾಗಲೇ ಅಧಿಕೃತ ನ್ಯಾಪ್‌ಟಾಲ್.ಕಾಂ ಕಂಪೆನಿಗೆ ಗೊತ್ತಾಗಿದೆ. ಹಾಗಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ‘ನಮ್ಮ ಕಂಪೆನಿಯ ಹೆಸರು ಹೋಲಿಕೆಯಾಗುವಂತೆ ಸೃಷ್ಟಿಸಿ ಲಕ್ಕಿ ಕೂಪನ್ ಅಂತೆಲ್ಲಾ ಗ್ರಾಹಕರನ್ನು ವಂಚಿಸಲು ಹೊರಟಿದ್ದಾರೆ. ನಮ್ಮ ಕಂಪೆನಿ ಇಂತಹ ಯಾವುದೇ ಲಕ್ಕಿ ಕೂಪನ್ ಘೋಷಿಸಿಲ್ಲ. ಯಾರೂ ಕೂಡಾ ಇಂತಹ ಮೋಸಕ್ಕೆ ಒಳಗಾಗಿ ಹಣ ವರ್ಗಾವಣೆಯಾಗಲೀ, ನಿಮ್ಮ ಹಣಕಾಸು ವ್ಯವಹಾರದ ಮಾಹಿತಿಯನ್ನಾಗಲೀ ನೀಡಬಾರದೆಂದು’ ಎಚ್ಚರಿಕೆಯ ಸೂಚನೆಯನ್ನು ನೀಡಿದೆ.
ಮೋಸ ಎಂಬುದಕ್ಕೆ ಇಲ್ಲಿವೆ ಕೆಲವು ಸಾಬೀತು ಅಂಶಗಳು
- ವಾಟ್ಸಾಪ್ ಮೊಬೈಲ್ ಸಂಖ್ಯೆ : ನಿಮಗೆ ಬಂದಿರುವ ರಿಜಿಸ್ಟರ್ ಪೋಸ್ಟ್ ನಲ್ಲಿ ಇರುವ ಪತ್ರದಲ್ಲಿ ನಿಮ್ಮ ಯಾವುದೇ ಮಾಹಿತಿಗಳಿಗಾಗಿ ಕಡ್ಡಾಯವಾಗಿ ಈ ನಂಬರ್ ಮಾತ್ರ ಉಪಯೋಗಿಸಿ ಅಂತ ನಮೂದಿಸಿ ಒಂದು ವಾಟ್ಸಾಪ್ ಸಂಖ್ಯೆ ನಮೂದಿಸಲಾಗಿರುತ್ತದೆ. ಅಲ್ಲದೇ, ಕಂಪೆನಿಯ ಕಸ್ಟಮರ್ ಕೇರ್ ನಂಬರ್ ನ್ನು ಸಂಪರ್ಕಿಸದಿರಲು ಸೂಚಿಸಲಾಗಿದೆ. ಸರಕಾರದ ಕಂಪೆನಿ ಆಕ್ಟ್ ಪ್ರಕಾರ ಗೌಪ್ಯತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಕಸ್ಟಮರ್ ಕೇರ್‌ನವರು ನಿಮಗೆ ವಿವರ ಮಾಹಿತಿ ನೀಡುವುದಿಲ್ಲ’ ಎಂದು ಪಕ್ಕಾ ನಂಬಿಕೆ ಬರುವ ರೀತಿಯಲ್ಲಿ ಮಾಹಿತಿ ನೀಡಲಾಗಿದೆ.
- ಬಹುಮಾನ ಕಾರು, ಕೇಳಿದ್ದು ಬ್ಯಾಂಕ್ ಅಕೌಂಟ್ ಡಿಟೈಲ್ಸ್ : ಇನ್ನು ಪತ್ರದಲ್ಲಿರುವ ಬಹುಮಾನ ಸ್ವೀಕರಿಸಲು ಇರುವ ವಿಶೇಷ ಸೂಚನೆಯಲ್ಲಿ ‘ಒಮ್ಮೆ ನೀವು ಕೂಪನ್ ಸ್ಕ್ರ್ಯಾಚ್ ಮಾಡಿದರೆ ಮುಂದಿನ 72 ಗಂಟೆಗಳಲ್ಲಿ ಬಹುಮಾನವನ್ನು ಕ್ಲೈಮ್ ಮಾಡಿಕೊಳ್ಳಬೇಕೆಂದಿದೆ. ಅಲ್ಲದೇ ಬಹುಮಾನವಾಗಿ ದುಬಾರಿ ಮೌಲ್ಯದ ಕಾರು ಇರುತ್ತದೆ. ಆದರೆ ಪತ್ರದ ಕೆಳಭಾಗದಲ್ಲಿ ಬಹುಮಾನ ಕ್ಪೈಮ್ ಮಾಡಲು ನಿಮ್ಮ ಅಕೌಂಟ್ ಡಿಟೈಲ್ಸ್, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಂಬರ್ ಕೇಳಲಾಗಿದೆ. ಅಷ್ಟು ಡಿಟೈಲ್ಸ್ ನಮಗೆ ವಾಟ್ಸಾಪ್ ಮಾಡಿ ಎಂದಿರುತ್ತದೆ. ಇಲ್ಲೇ ಗೊತ್ತಾಗುತ್ತೆ ಇದೊಂದು ಫ್ರಾಡ್ ಅಂತ.
- ಗ್ರೀನ್ ಇಂಕ್ ಸಹಿ : ಲೆಟರ್ ನೋಡಿದ್ರೆ ಎಷ್ಟು ಪಕ್ಕಾ ನಂಬಿಬಿಡಬೇಕೆಂದರೆ ಕಂಪೆನಿಯ ಜನರಲ್ ಮನೇಜರ್ ಅಂತ ಒಂದು ಹೆಸರಿನಲ್ಲಿ ಈ ಪತ್ರ ಇರುತ್ತದೆ. ಅದೂ ಹಸಿರು ಶಾಯಿಯಲ್ಲಿ ಅಧಿಕೃತ ಸಹಿ ಇದ್ದಂತೆ ಇರುವುದು ಜನರಲ್ಲಿ ಮತ್ತಷ್ಟು ನಂಬಿಕೆ ಬರಿಸುತ್ತಿದೆ.
- ಬೇರೆ ಬೇರೆ ಪತ್ರಗಳ ಹೋಲಿಕೆ : ಅಧಿಕೃತ ನ್ಯಾಪ್‌ಟಾಲ್.ಕಾಂ ಮೂಲಕ ಒಂದು ಬಾರಿ ವಸ್ತು ಖರೀದಿಸಿದ್ದರೂ ನಿಮ್ಮ ವಿಳಾಸಕ್ಕೆ ಫೇಕ್ ಲಕ್ಕಿ ಕೂಪನ್ ಕಳುಹಿಸಲಾಗುತ್ತದೆ. ಸ್ಕ್ರ್ಯಾಚ್ ಕಾರ್ಡ್ ಜೊತೆಗಿರುವ ಪತ್ರಗಳನ್ನು ಪರಿಶೀಲಿಸಿದಾಗ ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲಾದ ಬೇರೆ ಬೇರೆ ಪತ್ರಗಳಲ್ಲಿ ಅವರು ನಮೂದಿಸಿರುವ ಮೊಬೈಲ್ ಅಥವಾ ವಾಟ್ಸಾಪ್ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ.
- ಕಂಪೆನಿ ವಿಳಾಸ ಫೇಕ್ : ಕೂಪನ್ ಜೊತೆಗಿರುವ ಪತ್ರದಲ್ಲಿ ಕಂಪೆನಿಯ ವಿಳಾಸ ನಮೂದಿಸಲಾಗಿದೆ. ಒಂದು ಪತ್ರದಲ್ಲಿ ‘ಕಚೇರಿ ವಿಳಾಸ – ಪಶ್ಚಿಮ ಬಂಗಳಾದ ಕೋಲ್ಕತ್ತಾ’ ಎಂದಿದೆ. ಆದರೆ ನ್ಯಾಪ್‌ಟಾಲ್.ಕಾಂ ತನ್ನ ವೆಬ್‌ಸೈಟ್ ಲ್ಲಿ ಪ್ರಕಟಿಸಿರುವಂತೆ ಅದರ ಅಧಿಕೃತ ರಿಜಿಸ್ಟರ್ ಕಚೇರಿ ಮಹಾರಾಷ್ಟ್ರದ ಥಾಣೆ’ಯಲ್ಲಿದೆ.
ಸಾರ್ವಜನಿಕರು ಕಡೆಗಣಿಸುವುದೇ ಉತ್ತಮ ಪರಿಹಾರ – ಉದಯರವಿ ಎಂ.ವೈ.
‘ಇಂತಹ ಫೇಕ್ ಆಮಿಷಗಳಿಗೆ ಸಾರ್ವಜನಿಕರು ಬಲಿಯಾಗಿರುವ ಬಗ್ಗೆ ಅಲ್ಲೋ ಇಲ್ಲೋ ಕೇಳಿ ಬರುತ್ತಿದೆ ಬಿಟ್ಟರೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದುವರೆಗೆ ನಿರ್ದಿಷ್ಟ ದೂರು ದಾಖಲಾಗಿಲ್ಲ. ಆದರೆ ಸಾರ್ವಜನಿಕರು ಮೋಸ ಹೋಗುವ ಪ್ರಮೇಯ ಇದ್ದೇ ಇರುತ್ತದೆ. ಮುಖ್ಯವಾಗಿ ಇಂತಹ ಪತ್ರಗಳಾಗಲೀ, ಸೋಷಿಯಲ್ ಮೀಡಿಯಾಗಳಲ್ಲಾಗಲೀ ಆಮಿಷ, ಆಫರ್ ಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತು ಅವುಗಳನ್ನು ಕಡೆಗಣಿಸುವುದೇ ಉತ್ತಮ ಪರಿಹಾರೋಪಯವಾಗಿದೆ’ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಉದಯರವಿ ಎಂ.ವೈ. ತಿಳಿಸಿದ್ದಾರೆ.
🖋 ಉಮೇಶ್ ಮಿತ್ತಡ್ಕ