ಉಪ್ಪಿನಂಗಡಿ: ಇಲ್ಲಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಆತನ ಬೆಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ಅದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಚಿಕ್ಕಮಗಳೂರು ಮೂಲದ ಅಂಜನ್ ಸಿ.ಎಂ ನಾಪತ್ತೆಯಾಗಿದ ವಿದ್ಯಾರ್ಥಿ. ಸೆ .21 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರ ನಡುವಿನಲ್ಲಿ ನಾಪತ್ತೆಯಾಗಿದ್ದ.

ಈತ ತನ್ನ ಕಾಲೇಜಿನ ಸಹಪಾಠಿ ಒಬ್ಬನಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೋಗಿರುವುದಾಗಿಯೂ , ಪ್ರಸ್ತುತ ಈತ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಇರುವುದಾಗಿಯೂ ಅಂಜನ್ ಮನೆಯವರು ಕಡಬ ಪೊಲೀಸರಿಗೆ ತಿಳಿಸಿದ್ದಾರೆ. ಕಡಬ ಠಾಣಾ ಎಸ್ ಐ ರುಕ್ಮಾ ನಾಯ್ಕರವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ವಸತಿ ನಿಲಯದ ಮ್ಯಾನೇಜರ್ ರಮೇಶ್ ಅವರು ಕಡಬ ಪೊಲೀಸ್ ಠಾಣೆಗೆ ಸೆ .21 ರಂದು ದೂರು ನೀಡಿದ್ದಾರೆ. ಅಂಜನ್ ಸಿ,ಎಮ್ ಯಾರಿಗೂ ತಿಳಿಸದೇ ವಸತಿ ನಿಲಯಕ್ಕೂ ಬಾರದೇ ಸ್ವಂತ ಮನೆಗೂ ಹೋಗದೇ ಸಂಭದಿಕರ ಮನೆಗೂ ಹೋಗದೇ ಕಾಣೆಯಾಗಿದ್ದು ಯಾರೋ ಅಪಹರಿಸಿರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.