ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೀರಿಗದಲ್ಲಿ 7 ತಿಂಗಳ ಹಿಂದೆ ಜಾಗದ ತಕರಾರಿಗೆ ಸಂಬಂಧಿಸಿ ಆರೋಪ, ಪ್ರತ್ಯಾರೋಪ ಹೊರಿಸಿ ಪೊಲೀಸ್ ಠಾಣಾ ಮೆಟ್ಟಿಲೇರಿದ ಇತ್ತಂಡದವರು ಇದೀಗ ಮತ್ತೆ ಹಲ್ಲೆ, ಜೀವಬೆದರಿಕೆ ಆರೋಪ, ಪ್ರತ್ಯಾರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದು, ಇತ್ತಂಡದ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಬೀರಿಗ ನಿವಾಸಿ ಲೇಖಶ್ರೀಯವರು ನೀಡಿದ ದೂರಿನಲ್ಲಿ ‘ಸೆ.21 ರ ಬೆಳಿಗ್ಗೆ ಸರ್ವೆ ನಂ.76/ಪಿ1 ರಲ್ಲಿ ಇರುವ 2.25 ಸೆಂಟ್ಸ್ ಪಟ್ಟ ಜಾಗದಲ್ಲಿ ನನ್ನ ಗಂಡ ದಿನೇಶ್ ಮತ್ತು ಅವರ ಸಹೋದರರಾದ ವಿನಂತ, ವಿವೇಕ ಮತ್ತು ಕೆಲಸಗಾರರಾದ ಧನರಾಜ್,ಅಣ್ಣು, ಸುಂದರ ಮತ್ತು ಹಿಟಾಚಿ ಚಾಲಕ ಸೊಪ್ಪಿನ ಮತ್ತು ಅಗಳಿನ ಕೆಲಸ ಮಾಡುತ್ತಿದ್ದಾಗ ಇಂದಿರಾ ಎಂಬವರು ಅಲ್ಲಿಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಲ್ಲಿನಿಂದ ನನಗೆ ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ. ಬಳಿಕ ಕೃಷ್ಣಪ್ರಸಾದ್ ಅವರ ಸಹೋದರ ಸಂದೀಪ್ ನ ರಿಕ್ಷಾದಲ್ಲಿ ತೆರಳಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಲೇಖಶ್ರೀ ನೀಡಿದ ದೂರಿನಂತೆ ಆರೋಪಿಗಳವಿರುದ್ಧ ಸೆಕ್ಷನ್ 447, 341,324, 504, 506, 355 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇನ್ನೊಂದು ಕಡೆ ಬೀರಿಗ ನಿವಾಸಿ ಹೊನ್ನಪ್ಪ ಗೌಡ ಅವರ ಪತ್ನಿ ಇಂದಿರಾ ಅವರು ನೀಡಿದ ದೂರಿನಲ್ಲಿ ‘ಸೆ.21 ರ ಬೆಳಿಗ್ಗೆ ನೆರೆಮನೆಯ ಲೇಖಶ್ರೀ, ಮೋನಪ್ಪ ಗೌಡ, ರವೀಂದ್ರ, ವಿನಂತಾ, ತಿಲಕ್, ದೀಕ್ಷಿತ್ ಎಂಬವರು ಸಿವಿಲ್ ವ್ಯಾಜ್ಯ ಇರುವ ಮತ್ತು ನ್ಯಾಯಾಲಯದಲ್ಲಿ ತೀರ್ಮಾನವಾಗದೆ ಯಾವುದೇ ಕೆಲಸ ಮಾಡಬಾರದೆಂದು ಇದ್ದರೂ ತಕರಾರು ಇರುವ ಜಾಗದಲ್ಲಿ ಹಿಟಾಚಿಯಿಂದ ನೆಲ ಸಮತಟ್ಟು ಮಾಡುತ್ತಿರುವುದನ್ನು ನಾನು ಪ್ರಶ್ನಿಸಿದಾಗ ಲೇಖಶ್ರೀಯವರು ಅವಾಚ್ಯ ಶಬ್ಧಗಳಿಂದ ನನ್ನನ್ನು ಗಟ್ಟಿ ಯಾಗಿ ಹಿಡಿದು ನಾನು ಧರಿಸಿದ ನೈಟಿಯನ್ನು ಎಳೆದು ಹಾಕಿ ನನಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಜೋರಾಗಿ ಕೂಗಿದಾಗ ಅಲ್ಲಿಗೆ ಬಂದ ನನ್ನ ಮಗ ಕೃಷ್ಣಪ್ರಸಾದ್ ನಿಗೂ ಅವರೆಲ್ಲ ಸೇರಿ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಇಂದಿರಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಸೆಕ್ಷನ್ 323,504,354(ಬಿ), 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

























