ಸುಬ್ರಹ್ಮಣ್ಯ: ಶೇಷಕುಟೀರ ವಸತಿ ಗೃಹದ ಮುಂದೆ ರಸ್ತೆಯ ಬಳಿ ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಹೋರಿಯೊಂದನ್ನು ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಕಾರ್ಯಕರ್ತರು ಹಾಗು ಊರವರು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಶೇಷಕುಟೀರ ವಸತಿ ಗೃಹದ ರಸ್ತೆಯ ಬಳಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಾಗೂ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರು ಸ್ವತಃ ತಾವೇ ಮುಂದೆ ನಿಂತು ಹೋರಿಯ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದು ಗಮನ ಸೆಳೆಯಿತು.
ಹೋರಿಯ ಒಂದು ಕಾಲು ಮುರಿತಗೊಂಡಿದ್ದರಿಂದ ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಅವರು ಪ್ರಥಮ ಚಿಕಿತ್ಸೆಯನ್ನು ಹಾಗು ಇಂಜೆಕ್ಷನ್ ನೀಡಿ, ಬಳಿಕ ಸುಬ್ರಮಣ್ಯ ಗ್ರಾಮ ಪಂಚಾಯತಿ ಕಸ ವಿಲೇವಾರಿ ಘಟಕದಲ್ಲಿ ಹೋರಿಗೆ ಆಶ್ರಯ ಕಲ್ಪಿಸಿದ್ದಾರೆ. ಅಕ್ರಮ ಕಸಾಯಿಖಾನೆಗೆ ಹೋರಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ವಾಹನದಿಂದ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರಕ್ಷಣಾ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಅಶೋಕ್ ಆಚಾರ್ಯ, ಕಾರ್ಯದರ್ಶಿ ಲಕ್ಷೀಶ್, ಭಜರಂಗದಳ ಸಂಯೋಜಕ ಮಹೇಶ್, ಗೋರಕ್ಷಕ್ ಪ್ರಮುಖ್ ಜೀವನ್, ಪ್ರಖಂಡ ಸಂಯೋಜಕ ವಿಗ್ನೇಶ್ ಸುಳ್ಯ, ಹರೀಶ್ ಮನಿರಾಜ್, ಅಶ್ವಥ್, ಕಾರ್ತಿಕ್ ರಾವ್ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.