ಪುತ್ತೂರು: ನಗರಸಭೆಯಲ್ಲಿ ಸೆ.23 ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಬೆಳಿಗ್ಗೆ ಸಭಾ ಕಾರ್ಯಕ್ರಮ, ಸರಕಾರದ ಸಹಾಯಧನ ವಿತರಣೆ ಬಳಿಕ ಪೌರ ಕಾರ್ಮಿಕರಿಗೆ ಒಳಾಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದೇಶದ ಜನರು ಬೆಚ್ಚನೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಜನರು ಕಣ್ಣುಬಿಡುವ ಮುನ್ನ ತಮ್ಮ ಕೆಲಸ ಮುಗಿಸುವ ತರಾತುರಿಯಲ್ಲಿರುತ್ತಾರೆ. ಆದರೆ ಇಂದಿಗೂ ಪೌರ ಕಾರ್ಮಿಕರಿಗೆ ಬೇಡಿಕೆಯಾಗಿರುವ ನೇರ ನೇಮಕತಾತಿ, ವಸತಿ ಸೌಕರ್ಯ ಸಿಕ್ಕಿಲ್ಲ ಎಂಬ ಕೊರಗು ಪೌರ ಕಾರ್ಮಿಕರಲ್ಲಿದೆ. ಕೋವಿಡ್ ಸಂದರ್ಭದಲ್ಲೂ ನಿತ್ಯ ಎದೆಗುಂದದೆ ತಮ್ಮ ಕಾಯಕ ಮಾಡುತ್ತಿದ್ದ ಪೌರ ಕಾರ್ಮಿಕರ ಪರಿಸ್ಥಿತಿಯ ಮಧ್ಯೆಯೂ ಪೌರ ಕಾರ್ಮಿಕರ ದಿನಾಚರಣೆ ಬಂದಿದೆ.
ಪೌರ ಕಾರ್ಮಿಕರು ಮೊಂಬತ್ತಿಯ ಹಾಗೆ :
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸವಣೂರುವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಮಾತನಾಡಿ ಪೌರಕಾರ್ಮಿಕರು ಮೊಂಬತ್ತಿಯ ಹಾಗೆ ಕೆಲಸ ಮಾಡುತ್ತಾರೆ. ಮೊಂಬತ್ತಿ ತಾನು ಉರಿದು ಜಗತ್ತಿಗೆ ಬೆಳಕು ಕೊಡುತ್ತದೆ. ಅದೇ ರೀತಿ ಪೌರ ಕಾರ್ಮಿಕರು ಕೆಲಸಕ್ಕೆ ನಮ್ಮಲ್ಲಿ ಪದಗಳೇ ಹೊರಬರುತ್ತಿಲ್ಲ. ಪೌರಕಾರ್ಮಿಕರ ಎಡಬಿಡದ ಶ್ರಮ ಇಲ್ಲದಿದ್ದರೆ. ನಾವು, ನೀವು ಸ್ವಚ್ಚ ಉಸಿರಾಟ ಮಾಡಲು ಸಾಧ್ಯವಿಲ್ಲ ಎಂದ ಅವರು ಪೌರ ಕಾರ್ಮಿಕರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ ಯಾಕೆಂದರೆ ವರ್ಷದ 365 ದಿನವೂ ಪೌರ ಕಾರ್ಮಿಕರನ್ನು ನೆನೆಸಬೇಕಾಗುವಂತಹ ಅದ್ಬುತವಾದ ಸೇವೆ ಪೌರ ಕಾರ್ಮಿಕರು ನೀಡುತ್ತಾರೆ ಎಂದ ಅವರು ಪೌರಕಾರ್ಮಿಕರ ಕರ್ತವ್ಯದ ಜೊತೆಗೆ ನಾಗರಿಕರು ಕೂಡಾ ಕೈ ಜೋಡಿಸಿದಾಗ, ನಗರಸಭೆ ನಿರ್ವಹಣೆ ಮಾಡಲು ಸಾಧ್ಯ. ನಾಗರಿಕ ಪ್ರಜ್ಞೆ ಹೊಂದಿದ್ದರೆ ನಗರಸಭೆ ಸ್ವಚ್ಚತೆಗೆ ಸಾಧ್ಯ ಎಂದರು.
ಆರೋಗ್ಯದ ಕಾಳಜಿಯೊಂದಿಗೆ ಆರ್ಥಿಕ ಉಳಿತಾಯ ಮಾಡಿ:
ಪೌರ ಕಾರ್ಮಿಕರು ಮಾಡುವ ಕೆಲಸದಲ್ಲಿ ನಿಯಂತ್ರಣಕ್ಕಾಗಿ ಕೆಲವೊಂದು ಆರೋಗ್ಯಕ್ಕೆ ಹಾನಿಕಾರಕ ಪದಾರ್ಥ ಸೇವಿಸುವುದು ಸಹಜ. ಆದರೆ ಅದು ಒಂದು ಕ್ಷಣದ ಸುಖ ಕೊಡುತ್ತದೆ ಹೊರತು ಜೀವನ ಪರ್ಯಂತ ಸುಖ ಸಿಗುವುದಿಲ್ಲ. ಇದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗುಡುಕ ತಿನ್ನುವ ಪ್ರಕರಣ ನಿಲ್ಲಿಸಿದಾಗ ಆರೋಗ್ಯ ವೃದ್ದಿಸುತ್ತದೆ. ಇದು ನೀವು ನಿಮ್ಮ ಕುಟುಂಬಕ್ಕೆ ಕೊಡುವ ದೊಡ್ಡ ವಿಮೆ. ಇದರ ಜೊತೆಗೆ ನಿಮ್ಮ ಆರ್ಥಿಕ ಉಳಿತಾಯ ವೃದ್ಧಿಸುತ್ತದೆ ಎಂದ ಸೀತಾರಾಮ ಕೇವಳ ಅವರು ಗುಡ್ಕ, ಸಿಗರೇಟ್, ಮದ್ಯಕ್ಕೆ ಬೆಲೆ ಏರಿಕೆ ಆದಾಗ ಯಾರೂ ಪ್ರತಿಭಟನೆ ಮಾಡಿಲ್ಲ. ಕೇವಲ ತೈಲ ಬೆಲೆ, ಅನಿಲಕ್ಕೆ ಏರಿಕೆ ಆದಾಗ ಪ್ರತಿಭಟನೆ ಕಂಡಿದ್ದೇವೆ ಎಂದರು.
ಬಯೋ ಗ್ಯಾಸ್‌ಪ್ಲಾಂಟ್‌ನಿಂದ ತ್ಯಾಜ್ಯ ವಿಲೇವಾರಿ:
ನಗರಸಭೆ ಹಸಿ ತ್ಯಾಜ್ಯವನ್ನು ಆದಷ್ಟು ಮನೆ ಮನೆಯಲ್ಲೇ ವಿಲೇವಾರಿ ಮಾಡುವಂತೆ ಪ್ರೋತ್ಸಾಹಿಸಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಬಯೋ ಗ್ಯಾಸ್ ಪ್ಲಾಂಟ್ ಅಳವಡಿಸಬೇಕು. ಇದಕ್ಕೆ ನಗರಸಭೆ ಉತ್ತೇಜನ ನೀಡಬೇಕು. ಇಂತಹ ಕ್ರಾಂತಿಕಾರಿ ವ್ಯವಸ್ಥೆಗೆ ನಗರಸಭೆ ಮುಂದಾದಾಗ ನಗರಸಭೆ ಸ್ವಚ್ಛ ಸುಂದರ ಆಗುತ್ತದೆ ಎಂದು ಸೀತಾರಾಮ ಕೇವಳ ಹೇಳಿದರು.

ಪೌರ ಕಾರ್ಮಿಕರು ನಗರಸಭೆಯ ಬೆನ್ನೆಲುಬು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಪೌರ ಕಾರ್ಮಿಕರ ಕಾಯಕ್ಕೆ ತಕ್ಕಂತೆ ಅವರು ನಗರಸಭೆಯ ಬೆನ್ನೆಲು ಆಗಿದ್ದಾರೆ. ಬೆಳಿಗ್ಗೆ ಗಂಟೆ ೫.೩೦ಕ್ಕೆ ಪ್ರಾರಂಭವಾದ ಅವರ ಕೆಲಸ ಮಧ್ಯಾಹ್ನದ ತನಕ ನಿರಂತರ ಕೆಲಸ ನಡೆಯುತ್ತದೆ. ನಮ್ಮ ಆಡಳಿತ ಬಂದ ಬಳಿಕ ಪೌರ ಕಾರ್ಮಿಕರ ಮೇಲೆ ಹೆಚ್ಚು ಮುತುವರ್ಜಿ ವಹಿಸಿ ಪೌರ ಕಾರ್ಮಿಕರಿಗೆ ಸಮವಸ್ತ್ರ, ಬ್ಯಾಡ್ಜ್ ವಿತರಣೆ, ಅವರ ನೇರ ಪಾವತಿಯ ಬಗ್ಗೆ ಸಚಿವರಿಗೆ ಮನವಿ ಕೊಡುವ ಕೆಲಸ ಮಾಡಿದ್ದೇವೆ. ಸರಕಾರದಿಂದ ರೂ. ೩,೫೦೦ ಸಹಾಯಧನದ ಬದಲು ರೂ. ೭ಸಾವಿರ ಕೊಡಲು ಸುತ್ತೋಲೆ ಬಂದಿದೆ. ಅದನ್ನು ನಗರಸಭೆ ನಿಧಿಯಿಂದ ಕೊಡಬೇಕಾಗಿರುವುದರಿಂದ ಕೌನ್ಸಿಲ್‌ನಲ್ಲಿ ಇಟ್ಟು ಬಳಿಕ ಕೊಡಲಾಗುವುದು. ಅದೇ ರೀತಿ ಬಲ್ನಾಡಿನಲ್ಲಿ ಪೌರ ಕಾರ್ಮಿಕರಿಗೆ ವಸತಿ ಮಾಡಲು ನಿಶ್ಚಯಿಸಲಾಗಿದೆ ಎಂದ ಅವರು ನಿಮ್ಮೊಂದಿಗೆ ನಾವಿದ್ದೇವೆ. ನಮ್ಮೊಂದಿಗೆ ನೀವಿದ್ದೀರಿ ಎಂಬ ನಂಬಿಕೆ ಇಟ್ಟು ಕೊಂಡಿದ್ದೇವೆ. ಮುಂದಿನ ದಿನ ಸ್ವಚ್ಛತೆಯಲ್ಲಿ ಪುತ್ತೂರು ನಗರಸಭೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಬೇಕು ಎಂದರು.
ನೇರವೇತನ ಪೌರ ಕಾರ್ಮಿಕರಿಗೂ ಸರಕಾರದ ಸಹಾಯಧನ ಸಿಗಲಿ:
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಕಾರ್ಮಿಕರಿಗಾಗಿ 12 ಗಂಟೆ ಬದಲು 8 ಗಂಟೆ ಕೆಲಸದ ಅವಧಿ ಸಿಕ್ಕಿರುವುದನ್ನು ನಾವು ಮೊದಲಾಗಿ ನೆನಪಿಸಬೇಕು ಎಂದ ಅವರು ಕೊರೋನಾ ಸಂದರ್ಭದಲ್ಲಿ ಭಯದ ವಾತಾವರಣವಿದ್ದರೂ ಪೌರ ಕಾರ್ಮಿಕರು ರಜೆ ಮಾಡದೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಸದಸ್ಯರು ನಮ್ಮ ಸಮಸ್ಯೆಗಳಿಗೆ ಪೂರ್ಣ ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ನಗರಸಭೆ ಪೂರ್ಣ ಬೆಂಬಲ ಕೊಟ್ಟಿದ್ದಾರೆ. ನೇರ ವೇತನ, ನೇಮಕಾತಿ ನಮ್ಮ ಉದ್ದೇಶ. ಒಂದು ತಿಂಗಳೊಳಗೆ ಭರವಸೆ ಈಡೇರಿಸದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದೇ ರೀತಿ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯಂತೆ ನಾವು ದಿನ ನಿತ್ಯದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದರಲ್ಲದೆ ಪೌರ ಕಾರ್ಮಿಕರ ದಿನಾಚರಣೆಯಂದು ಸರಕಾರ ನೀಡುವ ವಿಶೇಷ ಸಹಾಯಧನ ನೇರವೇತನ ಪೌರಕಾರ್ಮಿಕರಿಗೂ ನೀಡಬೇಕು ಮತ್ತು ಪೌರ ಕಾರ್ಮಿಕರ ದಿನಾಚರಣೆಗೆ ರೂ.೩ ಲಕ್ಷ ಅನುದಾನ ಇಡಬೇಕೆಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ಬನ್ನೂರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರ ವರ್ಷದಲ್ಲಿ ಎರಡು ದಿನ ಗುರುತು ಮಾಡಿತ್ತು. ರಾಜ್ಯಾದ್ಯಂತ ಸೆ.೨೩ಕ್ಕೆ ಪೌರ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುತ್ತಿದ್ದು, ಈ ದಿನ ಎಲ್ಲಾ ಪೌರ ಕಾರ್ಮಿಕರಿಗೆ ರಜೆ ನೀಡಲಾಗಿದ್ದು, ಕೋವಿಡ್ ಮಾರ್ಗಸೂಚಿಯಂತೆ ಪೌರ ಕಾರ್ಮಿಕರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿಲ್ಲ. ಹಾಗಾಗಿ ಅಕ್ಟೋಬರ್ ತಿಂಗಳಲ್ಲಿ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಿದ್ದೇವೆ ಎಂದರು.

ಪೌರ ಕಾರ್ಮಿಕರಿಗೆ ವಿಶೇಷ ಗೌರವ ಧನ:
ಸರಕಾರದಿಂದ ಪೌರಕಾರ್ಮಿಕರಿಗೆ ನೀಡುವ ವಿಶೇಷ ಗೌರವ ಧನ ವನ್ನು 12 ಮಂದಿ ಖಾಯಂ ಪೌರ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು. ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ, ರಾಧಾಕೃಷ್ಣ, ಸಿ.ಆರ್ ದೇವಾಡಿಗ ಅತಿಥಿಗಳನ್ನು ಗೌರವಿಸಿದರು. ವಾಣಿ ಪ್ರಾರ್ಥಿಸಿದರು. ರವಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.ಚಾಲಕ ರಾಧಾಕೃಷ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪೌರ ಕಾರ್ಮಿಕರಿಗೆ ಒಳಾಂಗಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.