ಪಟ್ನಾ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜಾಮೀನು ನೀಡಲು ಬಿಹಾರದ ನ್ಯಾಯಲಯವೊಂದು ವಿಧಿಸಿದ ಷರತ್ತು ಇದೀಗ ದೇಶದ ಗಮನ ಸೆಳೆಯುತ್ತಿದೆ.
ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನುಉಚಿತವಾಗಿ ತೊಳೆದು ಮತ್ತು ಇಸ್ತ್ರಿ ಮಾಡಿ ಕೊಡಬೇಕು ಎಂಬ ಷರತ್ತು ವಿಧಿಸಿ ಅತ್ಯಾಚಾರ ಯತ್ನ ಪ್ರಕರಣದ ಆರೋಪಿಗೆ ಜಾಮೀನು ನೀಡಲಾಗಿದೆ. 20 ವರ್ಷದ ಲಾಲನ್ ಕುಮಾರ್ ಈ ಷರತ್ತಿನನ್ವಯ ಜಾಮೀನು ಪಡೆದ ಆರೋಪಿ.
ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿರುವ ಮಹಿಳೆಯರ ಸಂಖ್ಯೆ ಸುಮಾರು 2000. ಬಿಹಾರದ ಮಧುಬನಿ ಜಿಲ್ಲೆಯ ಝಂಜಾರ್ ಪುರದ ಹೆಚ್ಚುವರಿ ಸೆಷನ್ ನ್ಯಾಯಾಧೀಶ-1 ಅವಿನಾಶ್ ಕುಮಾರ್ ಈ ವಿಶಿಷ್ಟ ಷರತ್ತು ವಿಧಿಸಿದ ನ್ಯಾಯಾಧೀಶ.
ಆರೋಪಿ ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ವೃತ್ತಿಯಿಂದ ಧೋಬಿ. ಕಿರುಕುಳ ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಆತನನ್ನು ಬಂಧಿಸಲಾಗಿತ್ತು. ಆರೋಪಿಯು ಗ್ರಾಮದ ಮುಖಿಯಾ (ಹಳ್ಳಿಯ ಮುಖ್ಯಸ್ಥ) ಅಥವಾ ಹಳ್ಳಿಯ ಯಾವುದೇ ಗೌರವಾನ್ವಿತ ಸಾರ್ವಜನಿಕ ಸೇವಕನಿಂದ ಷರತ್ತು ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ಪಡೆಯಬೇಕು ಮತ್ತು ಅದನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ನ್ಯಾಯದೀಶರು ಷರತ್ತಿನಲ್ಲಿ ತಿಳಿಸಿದ್ದಾರೆ. ಜತೆಗೆ ಆರೋಪಿಯೂ ರೂ .10,000 ದ ಜಾಮೀನು ಬಾಂಡ್ ನೀಡುವಂತೆ ನಿರ್ದೇಶಿಸಿದ್ದಾರೆ.