ಮಂಗಳೂರು: ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಮಂದಿ ತಮ್ಮ ಪ್ರಾಣ ತೆತ್ತಿದ್ದಾರೆ, ಅದೆಷ್ಟೋ ಮಂದಿ ತಮ್ಮ ಉಳಿವಿಗಾಗಿ ಕೇಶ ಮುಂಡನೆಯನ್ನು ಮಾಡಿದ್ದಾರೆ. ಸದ್ಯ ಮಾರಕ ರೋಗದಿಂದ ಕೂದಲು ಕಳೆದುಕೊಂಡವರಿಗೆ ನೇರವಾಗಲೆಂದು ಬಾಲಕಿಯೊಬ್ಬಳು ತನ್ನ ಸೌಂದರ್ಯ ಕೆಟ್ಟರೂ ಅಡ್ಡಿಯಿಲ್ಲ, ಇತರರಿಗೆ ಸಹಾಯ ಮಾಡೋಣವೆಂದು ಕೂದಲನ್ನು ದಾನ ಮಾಡಿದ್ದಾಳೆ. ಸುಮಾರು ಎರಡು ವರ್ಷಗಳಿಂದ ಅದಕ್ಕೆಂದೇ ಕೂದಲನ್ನು ಬೆಳೆಸಿ, ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.
ಮಂಗಳೂರಿನ ಮಲಯಾಳ ಮನೋರಮಾ ಪತ್ರಿಕೆಯ ವರದಿಗಾರ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೆನಪೋಯ ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿಗಳ ಪುತ್ರಿ ‘ಡಿಲ್ನಾ ರಾಜೇಶ್’ ಕೂದಲು ದಾನ ಮಾಡಿದ ಬಾಲಕಿ.

ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಕೂದಲು ಕಳೆದುಕೊಂಡ ಜನರಿಗೆ ವಿಗ್ ತಯಾರಿಸಲು ತನ್ನ ಕೇಶವನ್ನು ದಾನ ಮಾಡಿದ್ದಾಳೆ. 9ರ ಹರೆಯದಲ್ಲಿ ತನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕಳೆದ ಎರಡು ವರ್ಷದಿಂದ ಕೂದಲನ್ನು ಕತ್ತರಿಸದೆ ಬೆಳೆಸಲಾಯಿತು.
ಜನವರಿ 14 ರಂದು ತನ್ನ 11 ನೇ ಹುಟ್ಟುಹಬ್ಬದಂದು ನೀಡಲು ನಿರ್ಧಾರ ತೆಗೆದುಕೊಳ್ಳಲಾಗುತ್ತು, ಆದರೆ ಕೋವಿಡ್ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 22 ರಂದು ತನ್ನ ಕೇಶವನ್ನು ಕೊಡುಗೆ ನೀಡಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ನೀಡಲು ಕೂದಲನ್ನು ಸಂಗ್ರಹಿಸುವಲ್ಲಿ ನೈಪುಣ್ಯತೆ ಇರುವ ಮಂಗಳೂರು ಬಿಜೈ ನ್ಯೂ ರೋಡ್ ಪ್ಯಾರಡೈಸ್ ಸ್ಟ್ರೀಕ್ ಕಟ್ಟಡದಲ್ಲಿರುವ ಯಚ್ಚೂಸ್ ಹೇರ್ ಗ್ಯಾರೇಜ್‌ನಿಂದ ಕೂದಲನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್‌ಗಳನ್ನು ತಯಾರಿಸಿ ನೀಡುವ ಕೇರಳ ತ್ರಿಶೂರಿನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್‌ಗೆ ಕೂದಲನ್ನು ಕಳುಹಿಸಲಾಯಿತು ಎಂದು ಡಿಲ್ನಾ ಹೇಳಿದ್ದಾಳೆ.