ಮೈಸೂರು: ಜಿಲ್ಲೆಯ ನಂಜನಗೂಡು ದೇವಸ್ಥಾನ ತೆರವುಗೊಳಿಸಿದ ತಹಶೀಲ್ದಾರ್ ವರ್ಗಾವಣೆಗೊಳಿಸಲಾಗಿದೆ.ಹುಚ್ಚಗಣಿ ಮಹದೇವಮ್ಮ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿಯನ್ನು ವರ್ಗಾಣೆಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಚ್ಚಗಣಿ ದೇವಾಲಯ ತೆರವು ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ರಾಜ್ಯ ಸರ್ಕಾರದ ವಿರುದ್ಧ ಭಾರೀ ಆಕ್ರೋಶದ ಕೂಗು ಕೇಳಿಬಂದಿತ್ತು, ಇದೀಗ ಮೈಸೂರು ಜಿಲ್ಲೆಯ ನಂಜನಗೂಡು ದೇವಸ್ಥಾನ ತೆರವುಗೊಳಿಸಿದ ತಹಶೀಲ್ದಾರ್ ವರ್ಗಾವಣೆಗೊಳಿಸಿ ರಾಜ್ಯ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರದ ನಿಯಮಾವಳಿಗಳಿಗೆ ಒಳಪಡುವ ಧಾರ್ಮಿಕ ಕೇಂದ್ರಗಳನ್ನು ಕೆಡಹಬಾರದು ಎಂದು ತಿಳಿಸುವ ಬಗ್ಗೆ ಯೋಜಿಸಲಾಗಿತ್ತು. ಇದೀಗ, ರಾಜ್ಯದಲ್ಲಿ ವಿವಾದ ಸೃಷ್ಟಿಸಿದ್ದ ದೇಗುಲ ತೆರವು ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ತಹಶೀಲ್ದಾರ್ ತಲೆದಂಡವಾಗಿದೆ.
ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು. ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.ದೇಗುಲ ತೆರವು ಮಾಡಿದ ವಿಚಾರಕ್ಕೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಇದೀಗ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನಂಜನಗೂಡು ದೇವಾಲಯ ತೆರವು ಅಧಿಕಾರಿಗಳ ಆತುರದ ನಿರ್ಧಾರವಾಗಿದೆ. ಪರಿಣಾಮಗಳ ಬಗ್ಗೆ ಯೋಚಿಸದೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದರು. ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇನೆ. ದೇಗುಲ ತೆರವುಗೊಳಿಸಿದ ವಿಚಾರದಲ್ಲಿ ಕೆಲ ಭಕ್ತರಿಗೆ ನೋವಾಗಿದ್ದು, ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಸರಿದೂಗಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಅಭಯ ನೀಡಿದ್ದರು. ಅಲ್ಲದೇ ರಾಜ್ಯದ ಹಲವು ಕಡೆ ಮಂದಿರ ತೆರವುಗೊಳಿಸಿದ ವಿಚಾರಕ್ಕೆ ಪ್ರತಿಭಟನೆ ನಡೆದಿದ್ದವು.