ಪುತ್ತೂರು: ಕೋಡಿಂಬಾಡಿ ಮೊಬೈಲ್ ಬಳಕೆದಾರರ ನೆಟ್ವರ್ಕ್ ಸಮಸ್ಯೆ ಹೋರಾಟ ಸಮಿತಿ ಮನವಿಗೆ ಸ್ಪಂದಿಸಿದ ಜಿಯೋ ನೆಟ್ವರ್ಕ್ ಇದೀಗ ಕೋಡಿಂಬಾಡಿಯಲ್ಲಿ ಜಿಯೋ ಟವರ್ ಅನ್ನು ನಿರ್ಮಾಣ ಮಾಡಿದೆ. ಇದರಿಂದಾಗಿ ಮೊಬೈಲ್ ಬಳಕೆದಾರರ ನೆಟ್ವರ್ಕ್ ಸಮಸ್ಯೆ ಹೋರಾಟ ಸಮಿತಿಯ ಹೋರಾಟಕ್ಕೆ ಜಯ ದೊರೆತಂತಾಗಿದೆ.

ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಪ್ರಮುಖರು ಒಟ್ಟಾಗಿಕೊಂಡು, ಮೊಬೈಲ್ ಬಳಕೆದಾರರ ನೆಟ್ವರ್ಕ್ ಹೋರಾಟ ಸಮಿತಿ ಎಂಬ ಸಮಿತಿಯೊಂದನ್ನು ಕಟ್ಟಿಕೊಂಡು, ಅದರ ಮೂಲಕ ಹೋರಾಟ ನಡೆಸಿ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾಗಿದ್ದಾರೆ.
ಸಮಿತಿಯ ಗೌರವ ಸಲಹೆಗಾರ ಮುರಳಿಧರ ರೈ ಮಠಂತಬೆಟ್ಟು, ಅಧ್ಯಕ್ಷ ವಿಕ್ರಮ್ ಶೆಟ್ಟಿ ಅಂತರ, ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕಾರ್ಯದರ್ಶಿ ಗುಣಕರ ಏಕ, ಜೊತೆ ಕಾರ್ಯದರ್ಶಿ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಉಪಾಧ್ಯಕ್ಷ ಪ್ರಭಾಕರ ಸಾಮಾನಿ ಮಠಂತಬೆಟ್ಟು, ಜಗದೀಶ್ ಕಜೆ,ಸಂಘಟನಾ ಕಾರ್ಯದರ್ಶಿ ಸುರೇಶ್ ಕೃಷ್ಣಗಿರಿ,ಸುಭಾಶ್ ರವಿ ಕೋಡಿಂಬಾಡಿ,ರಾಜೇಶ್ ಮೊದಲಾದವರು ಈ ಹೋರಾಟವನ್ನು ಮುನ್ನಡೆಸಿದ್ದರು.
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕ ಮುಡ್ನೂರು, ದಾರಂದಕುಕ್ಕು, ಮಠಂತಬೆಟ್ಟು, ಶಾಂತಿನಗರ ಮುಂತಾದ ಪರಿಸರದಲ್ಲಿ ಸಾರ್ವಜನಿಕರು ಹಲವಾರು ಸಮಯದಿಂದ ಎದುರಿಸುತ್ತಿರುವ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ವಿವಿಧ ಮೊಬೈಲ್ ಕಂಪೆನಿಗಳಿಗೆ ಈ ಹಿಂದೆಯೇ ಮನವಿ ನೀಡಿದ್ದು, ಈ ಪರಿಸರದಲ್ಲಿ ಜಿಯೋ ಸಿಮ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಕೋಡಿಂಬಾಡಿ ಪರಿಸರದಲ್ಲಿ ಜೀಯೋ ಕಂಪೆನಿಯ ಟವರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕೋಡಿಂಬಾಡಿ ಮೊಬೈಲ್ ಬಳಕೆದಾರರ ನೆಟ್ವರ್ಕ್ ಸಮಸ್ಯೆ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು.

ಮನವಿ ಸ್ವೀಕರಿಸಿದ ರಿಲಾಯನ್ಸ್ ಜಿಯೋ ಇನ್ಫೋಕಮ್ ಲಿಮಿಟೆಡ್ ನ ಅಧಿಕಾರಿ ರೋಹಿತ್ ಫೇರ್ನಾಂಡಿಸ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೋಡಿಂಬಾಡಿ ವಲಯದಲ್ಲಿ ಜಿಯೋ ಟವರ್ ನಿರ್ಮಾಣವಾಗಿದೆ. ಇದೀಗ ಟೆಸ್ಟಿಂಗ್ ಆರಂಭವಾಗಿದೆ ಕೆಲವೇ ದಿನಗಳಲ್ಲಿ ಅಧಿಕೃತವಾಗಲಿದೆ.

ಏರ್ ಟೆಲ್ ಬಳಕೆದಾರರು ಈಗ ಜಿಯೋ ನೆಟ್ ವರ್ಕ್ ಗೆ ಪೋರ್ಟ್ ಮಾಡಲು ಚಿಂತನೆ ನಡೆಸುತ್ತಿದ್ದಾರೆ.



























