ವಿಟ್ಲ: ಕಾರಿನಲ್ಲಿ ಬಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ವಿಟ್ಲ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕುದ್ದುಪದವು ನಿವಾಸಿ ಎಂ. ಕೃಷ್ಣ (೩೭), ಉಕ್ಕುಡ ದರ್ಬೆ ನಿವಾಸಿ ಕೇಶವ ಬಂಗೇರ (೫೪), ಬಾಯಾರು ನಿವಾಸಿ ಅಶೋಕ್ ಕುಮಾರ್ ಟಿ. (೩೭), ಕಾಸರಗೋಡು ನಿವಾಸಿ ಚಂದ್ರಶೇಖರ ಸಿ (೩೭) ಬಂಧಿತರು.
ಕೆಲವು ದಿನಗಳ ಹಿಂದೆ ಅಳಿಕೆ ಬರೆಂಗೊಡಿ ತರವಾಡು ಮನೆಯ ವಿಚಾರದಲ್ಲಿ ದೂರವಾಣಿ ಕರೆ ಮಾಡಿ ಜಾಗ ನೋಡಲು ಬರುವುದಾಗಿ ಹೇಳಿದ್ದು, ದಾರಿ ಹೇಳುವ ನಿಟ್ಟಿನಲ್ಲಿ ರಸ್ತೆಗೆ ಬರ ಹೇಳಿದ್ದರು. ಈ ಹಿನ್ನಲೆಯಲ್ಲಿ ಬರಂಗೋಡಿ ನಿವಾಸಿ ರಾಜೀವ ಬಿ. ಶಾರದಾ ವಿಹಾರ -ಬೈರಿಕಟ್ಟೆ ರಸ್ತೆಯ ಬರೆಂಗೋಡಿಯಲ್ಲಿ ಇದ್ದಾಗ ಓಮ್ನಿ ಕಾರಿನಲ್ಲಿ ಆಗಮಿಸಿದ ಅಪರಿಚಿತರು ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಾರೆ. ಈ ಸಮಯ ಬೈಕ್ ಆಗಮಿಸಿದ್ದನ್ನು ಕಂಡು ಅಪರಿಚಿತರು ಪಲಾಯನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈಜ್ಞಾನಿಕ ತನಿಖೆಯ ಮೂಲಕ ವಿಟ್ಲ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.