ಕಡಬ: ಕೋಳಿ ಪದಾರ್ಥ ಸೇವಿಸಿದ ಓರ್ವ ವ್ಯಕ್ತಿ ಮೃತಪಟ್ಟು, ಮೂವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಘಟನೆ ಕಡಬ ತಾಲೂಕಿನ ಬಲ್ಯ ಗ್ರಾಮದಿಂದ ಅ.1 ರಂದು ವರದಿಯಾಗಿದೆ.
ಬಲ್ಯ ಗ್ರಾಮದ ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ(60) ಮೃತಪಟ್ಟವರು. ಅದೇ ಗ್ರಾಮದ ಸಂಜೀವ ದೇವಾಡಿಗ ಎಂಬವರ ಪತ್ನಿ ಗೀತಾ, ಮಕ್ಕಳಾದ ಶ್ರೇಯಾ ಮತ್ತು ಶ್ರಾವಣ್ ಆಹಾರ ಸೇವಿಸಿ ಅಸ್ವಸ್ಥಗೊಂಡವರು. ಈ ಬಗ್ಗೆ ದೇವಪ್ಪ ಗೌಡರ ಪುತ್ರಿ ಶೀಲಾ ರವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸಂಘದ ಅಡಿಯಲ್ಲಿ ಕೂಲಿ ಕೆಲಸ ಮಾಡಲು ಸೆ .26 ರಂದು ದೇವಪ್ಪ ಗೌಡ ರವರು ನೆರೆಮನೆಯ ಸಂಜೀವ ದೇವಾಡಿಗರವರ ಮನೆಗೆ ಹೋಗಿದ್ದರು. ಮದ್ಯಾಹ್ನ ಊಟದ ಸಂದರ್ಭ ದೇವಪ್ಪ ಗೌಡರವರ ಜತೆ ಮನೆ ಯಜಮಾನ ಸಂಜೀವ ದೇವಾಡಿಗ ಮತ್ತು ಅವರ ಮನೆಯವರು ಕೋಳಿ ಪದಾರ್ಥವನ್ನು ಸೇವಿಸಿದ್ದರು.
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ದೇವಪ್ಪರವರ ಆರೋಗ್ಯ ಹದಗೆಟ್ಟಿದ್ದು, ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಸಂಜೀವ ದೇವಾಡಿಗರವರ ಮನೆಯವರಾದ ಅವರ ಪತ್ನಿ ಗೀತಾ, ಮಕ್ಕಳಾದ ಶ್ರೇಯಾ ಮತ್ತು ಶ್ರಾವಣ್ ಕೂಡ ಹೊಟ್ಟೆ ಕೆಟ್ಟು ಅದೇ ಆಸ್ಪತ್ರೆಗೆ ದಾಖಲಾಗಿದ್ದರು.
ದೇವಪ್ಪರವರಿಗೆ ರೋಗ ಉಲ್ಬಣಿಸಿದ ಹಿನ್ನಲೆಯಲ್ಲಿ ಸೆ.30 ರಂದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಹಾಗೂ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸೆ.1 ರಂದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.



























