ಮಂಗಳೂರು: ಬೈಕ್‌ವೊಂದು ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು, ಬೈಕ್ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕೆಪಿಟಿ ಸಮೀಪ ಅ.4 ರಂದು ನಡೆದಿದೆ.
ದೇರಳಕಟ್ಟೆಯ ನಿವಾಸಿ ಅಬ್ದುಲ್ ಹಸೀಬ್ (19) ಮೃತಪಟ್ಟವರು. ಸಹಸವಾರ ಇಸ್ಮಾಯಿಲ್ ಸ್ವಾಬೀರ್ (18) ಗಾಯಗೊಂಡವರು.
ದೇರಳಕಟ್ಟೆಯಿಂದ ಸೋಮವಾರ ನಸುಕಿನ ಜಾವ 4:30ರ ಸುಮಾರಿಗೆ ಇಸ್ಮಾಯಿಲ್ ಅವರನ್ನು ಹಿಂಬದಿ ಸವಾರನನ್ನಾಗಿಸಿ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ಅಬ್ದುಲ್ ಹಸೀಬ್ ನಂತೂರು ಮಾರ್ಗವಾಗಿ ನಗರಕ್ಕೆ ಆಗಮಿಸಿದ್ದಾರೆ.
ಕೆಪಿಟಿ ಮೂಲಕ ಬೈಕಂಪಾಡಿಗೆ ಹೊರಟು ತೆರಳುತ್ತಿದ್ದ ಮಾರ್ಗದಲ್ಲಿನ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಹಾಗೂ ಸಹ ಸವಾರನಿಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆ ಫಲಕಾರಿಯಾಗದೇ ಅಬ್ದುಲ್ ಹಸೀಬ್ ಮೃತಪಟ್ಟಿದ್ದಾರೆ. ಸಹಸವಾರ ಇಸ್ಮಾಯಿಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.