ಪುತ್ತೂರು: ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಯವರು ಪುತ್ತೂರಿನ ಸಮಸ್ತ ಎಸ್ಸಿ ಜನಾಂಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸುವ ಉದ್ದೇಶದಿಂದ ಎಸ್ಸಿ ಘಟಕವನ್ನು ರಚಿಸಲಾಗಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಿ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರಿಸಿ ತುಳಿತಕ್ಕೊಳಗಾದ ಎಸ್ಸಿ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ,ಮನೆಗಳಿಗೆ ಮತ್ತು ಹೋಟೆಲುಗಳಿಗೆ ಪ್ರವೇಶ ನೀಡದೆ, ಎಲ್ಲರೂ ಬಳಸುವ ಲೋಟಗಳ ಬದಲಾಗಿ ತೆಂಗಿನಕಾಯಿ ಗೆರಟೆಯಲ್ಲಿ ಚಹಾ ನೀಡುತ್ತಿದ್ದ ವ್ಯವಸ್ಥೆಯನ್ನು ಬದಲಾಯಿಸಿ ಇಂದು ದೇಶದಲ್ಲಿ ಸಮಾನವಾಗಿ ಗೌರವದಿಂದ ಬದುಕುವ ಅವಕಾಶವನ್ನು ಮಾಡಿಕೊಟ್ಟ ಸಂಪೂರ್ಣ ಕೀರ್ತಿ ಅಂದಿನ ಪ್ರಧಾನಿ ಇಂದಿರಾಗಾಂಧಿಗೆ ಸಲ್ಲುತ್ತದೆ ಎಂದ ಅವರು ಅಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದಿರುತ್ತಿದ್ದರೆ, ನೆಹರೂ ಹಾಗೂ ಮಹಾತ್ಮ ಗಾಂಧೀಜಿಯವರು ಸರ್ವಜನಾಂಗದ ಸಮಾನತೆಯನ್ನು ಪ್ರತಿಪಾದಿಸಿದೆ ಇರುತ್ತಿದ್ದರೆ ಈ ಸಮಾಜದಲ್ಲಿ ಇಂದು ಈ ಬದಲಾವಣೆಯನ್ನು ಕಾಣುವುದಕ್ಕೆ ಸಾಧ್ಯವಿರುತ್ತಿರಲಿಲ್ಲ ಎಂದು ಹೇಳಿದರು.
ಆರ್.ಎಸ್.ಎಸ್. ಮತ್ತು ಬಿಜೆಪಿಗರು ದಲಿತ ವಿರೋಧಿಗಳು ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತ ಹೇಳುತ್ತಿರುವುದೇ ದಲಿತರಿಗೆ ಅನ್ಯಾಯ ಮಾಡಲು ಎಂದು ಕೆಪಿಸಿಸಿ ವಕ್ತಾರ ಕೊಪ್ಪದ ಸುಧೀರ್ ಕುಮಾರ್ ಮರೋಳಿ ಹೇಳಿದರು ಅವರು ಪುತ್ತೂರು ಬ್ಲಾಕ್ ಎಸ್ ಸಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ , ಹಸಿದವರ ಹಸಿವನ್ನು ನೀಗಿಸುವ ರಾಜಕಾರಣವನ್ನು ವಿಶ್ವದಲ್ಲಿ ಮಾಡಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ಹೇಳಿದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು, ಅಂಬೇಡ್ಕರ್ ರವರ ಮೂಲಕ ಸಂವಿಧಾನವನ್ನು ರಚಿಸಿದ್ದು ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಯಥಾವತ್ತಾಗಿ ಅಂಗೀಕರಿಸಿ ಜಾರಿಗೆ ತಂದ ಕೀರ್ತಿ ಅದು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ಅಂದು ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿಯನ್ನು ನೀಡಿದ ಕಾರಣಕ್ಕಾಗಿಯೇ ಆರ್. ಎಸ್. ಎಸ್. ಚಿಂತನೆಗಳಿಂದ ಪ್ರೇರಿತನಾದ ಗೋಡ್ಸೆಯಿಂದ ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆಯಿತು ಎಂದು ಪ್ರತಿಪಾದಿಸಿದರು.
ಪ್ರಪಂಚದ ಎಲ್ಲ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದಲಿತ ಸಮುದಾಯದ ನೋವು-ನಲಿವುಗಳನ್ನು ಸ್ಪಷ್ಟವಾಗಿ ಕಂಡಿದ್ದ ಮತ್ತು ಅವರ ಬದುಕನ್ನು ಹಸನುಗೊಳಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಂಬೇಡ್ಕರ್ ಅವರನ್ನು ಗುರುತಿಸಿ ಸಂವಿಧಾನವನ್ನು ಬರೆಯುವ ಜವಾಬ್ದಾರಿಯನ್ನು ಕೊಟ್ಟದ್ದು ಕಾಂಗ್ರೆಸ್ ನ ಸರ್ವಮಾನ್ಯ ನಾಯಕರಾದ ಮಹಾತ್ಮ ಗಾಂಧಿಯವರಿಗೆ ಸಲ್ಲುತ್ತದೆ ಅಂದು ಕಾಂಗ್ರೆಸ್ಸನ್ನು ವಿರೋಧಿಸಿದ ಆರ್.ಎಸ್.ಎಸ್ ನವರು ಸ್ವತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ, ಬ್ರಿಟಿಷರೊಂದಿಗೆ ಸೇರಿ ಷಡ್ಯಂತ್ರ ನಡೆಸಿದರು. ದಲಿತರು ಸಹಿತ ದೇಶದ ಶೋಷಿತ ಜನಾಂಗದ ಪರ ನಿಂತಿದ್ದಾರೆ ಎಂಬ ಕಾರಣಕ್ಕಾಗಿ ಗಾಂಧಿಯನ್ನು ಹತ್ಯೆಗೈದರು. ಅದೇ ಆರೆಸ್ಸೆಸ್ ಮತ್ತು ಬಿಜೆಪಿ ಇಂದು ಸಂವಿಧಾನವನ್ನು ಬದಲಿಸುವ ಪ್ರಯತ್ನದಲ್ಲಿದ್ದಾರೆ, ಆದರೆ ಕಾಂಗ್ರೆಸ್ ಇದಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳಿದರು.
ಸಮಾಜದ ಕೆಳವರ್ಗದಿಂದ ಬಂದಂತಹ ಎಲ್ಲ ಜನರಿಗೆ ಸಮಾನ ಅವಕಾಶವನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮಾತನಾಡಿ ಸಾವಿರಾರು ವರ್ಷಗಳಿಂದ ಈ ಭೂಮಿಯ ನಿಜವಾದ ಒಡೆಯರಾದ ದ್ರಾವಿಡರನ್ನು ಅದುಮಿ ಹಿಡಿದು, ಸಮಾಜದಿಂದ ದೂರವಾಗಿ ಮೂಲೆಯಲ್ಲಿ ಕುಳ್ಳಿರಿಸಿ, ಅವರ ಹಕ್ಕುಗಳನ್ನು ಕಿತ್ತುಕೊಂಡು ಶೋಷಿಸಲಾಗಿದೆ. ದ್ರಾವಿಡ ಸಮಾಜದ ಪ್ರತಿಯೊಬ್ಬರಲ್ಲೂ ದ್ರಾವಿಡ ಪ್ರಜ್ಞೆ ಜಾಗೃತಗೊಂಡು ಧ್ವನಿಯೆತ್ತಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಎಂಬುದು ತಂದೆ-ತಾಯಿ ಇದ್ದಂತೆ, ದೀನರನ್ನು ದಲಿತರನ್ನು ತಾಯಿ-ತಂದೆಯರಂತೆ ಪೊರೆದು ವಿಶೇಷ ಕಾನೂನುಗಳ ಮೂಲಕ ಅವರಿಗೆ ಶಕ್ತಿ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು. ಬಡವರ ಮತ್ತು ದೀನದಲಿತರ ವಿರೋಧಿಯಾದ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅನ್ನು ಬಲಗೊಳಿಸುವಂತೆ ಕರೆ ನೀಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಕೇಶವ ಪಡೀಲ್ ರವರು ಮಾತನಾಡಿ ಪುತ್ತೂರಿನಲ್ಲಿ ಪರಿಶಿಷ್ಟ ಜಾತಿ ಘಟಕವನ್ನು ಸಂಘಟಿಸಿ ಬಲಪಡಿಸಿ, ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡುವ ಭರವಸೆಯನ್ನು ನೀಡಿದರು.
ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್. ಸಿ.ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಉಳಿಯ ಬೇಕಾಗಿದ್ದರೆ ದೇಶದ ಮೂಲನಿವಾಸಿಗಳಾದ ದ್ರಾವಿಡರು ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದರು. ದಲಿತರಿಗೆ ಸಮಾನ ಅವಕಾಶವನ್ನು ಹೇಳಿ, ದಲಿತರ ಉದ್ದಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು, ದಲಿತರ ಸ್ಥಿತಿಗತಿಯಲ್ಲಿ ಬದಲಾವಣೆಯನ್ನು ತಂದು ಮುನ್ನಡೆಸಿದ ಪಕ್ಷವೆಂದರೆ ಅದು ಕಾಂಗ್ರೆಸ್ಎಂದು ಹೇಳಿದರು.
ದಲಿತ ಮುಖಂಡರುಗಳಾದ ಡಾ. ರಘು, ಮಾಜಿ ಜಿ ಪ ಅಧ್ಯಕ್ಷ ಸೋಮನಾಥ, ಅಭಿಷೇಕ್ ಬೆಳ್ಳಿಪ್ಪಾಡಿ, ಐತಪ್ಪ ಪೇರಲ್ತಡ್ಕ, ಶೇಷಪ್ಪ ನೆಕ್ಕಿಲು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಜಿಲ್ಲಾ ಸಹಕಾರಿ ಯೂನಿಯನಿನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮುಂಚೂಣಿ ಘಟಕದ ಅಧ್ಯಕ್ಷರುಗಳು, ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಮ ಮೇನಾಲ ಸ್ವಾಗತಿಸಿ, ಮುಕೇಶ್ ಕೆಮ್ಮಿಂಜೆ ಕಾರ್ಯಕ್ರಮ ನಿರೂಪಣೆ ಮಾಡಿದರು.