ಬಂಟ್ವಾಳ: ಅಪ್ರಾಪ್ತೆ ಬಾಲಕಿಗೆ ಮತ್ತು ಭರಿಸುವ ಔಷಧ ನೀಡಿ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ.
ಐವರು ಕಾಮುಕರು ಅಪ್ರಾಪ್ತೆ ಬಾಲಕಿಯ ಮೇಲೆ ನಿನ್ನೆ ಗ್ಯಾಂಗ್ ರೇಪ್ ನಡೆಸಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಮತ್ತು ಭರಿಸುವ ಔಷಧ ನೀಡಿ ಅಪಹರಿಸಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಮ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿಯ ಹೇಳಿಕೆಯ ಆಧಾರದಲ್ಲಿ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಶೀಘ್ರ ಬಂಧಿಸುವ ಸಾಧ್ಯತೆ ಇದೆ.
ಅತ್ಯಾಚಾರದ ಬಳಿಕ ಆರೋಪಿಗಳು ಬಾಲಕಿಯನ್ನು ಬ್ರಹ್ಮರಕೂಟ್ಲು ಬಳಿ ಬಿಟ್ಟು ಹೋಗಿರುವುದು ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ. ಘಟನೆ ಕುರಿತು ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಐದು ಜನ ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 116/2021 ಕಲಂ: 366(a), 376(D), 506 ಐಪಿಸಿ ಮತ್ತು ಕಲಂ: 04, 06 POCSO ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.