ಮಂಡ್ಯ: ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ಪಟಾಕಿ ಶಬ್ದಕ್ಕೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುತ್ತಿದ್ದ ಗೋಪಾಲಸ್ವಾಮಿ ಆನೆ ಬೆದರಿದ್ದು, ಈ ವೇಳೆ ಜನರು ಜೀವ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ ಘಟನೆ ನಡೆದಿದೆ.
ನಾಡದೇವಿಗೆ ಪುಷ್ಪಾರ್ಚನೆ ಬಳಿಕ ಆನೆ ಬೆದರಿದ್ದು ಶ್ರೀರಂಗಪಟ್ಟಣದ ಬನ್ನಿಮಂಟಪ ಬಳಿ ಘಟನೆ ನಡೆದಿದೆ. ಆನೆ ಬೆದರುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ. ವಾದ್ಯ, ಧ್ವನಿವರ್ಧಕ ಬಂದ್ ಮಾಡಿದ ಬಳಿಕ ಆನೆ ಸಮಾಧಾನಗೊಂಡಿದೆ.
ಆನೆ ಬೆದರಿದ ಹಿನ್ನೆಲೆ ಜಂಬೂ ಸವಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಆನೆ ಮೇಲಿದ್ದ ಮರದ ಅಂಬಾರಿಯನ್ನ ಸಿಬ್ಬಂದಿ ಕಳಚಿಟ್ಟಿದ್ದಾರೆಂಬ ಮಾಹಿತಿ ಇದೆ. ಸದ್ಯ ಗೋಪಲಸ್ವಾಮಿ ಆನೆಯ ಕಾಲಿಗೆ ಸರಪಳಿ ಹಾಕಲಾಗಿದೆ. ಇತ್ತೀಚೆಗೆ ಮೈಸೂರಿನಲ್ಲೂ ಪಟಾಕಿ ಟ್ರೈನಿಂಗ್ ಹಾಗೂ ಪಿರಂಗಿ ತಾಲೀಮಿನ ವೇಳೆಯಲ್ಲೂ ಗೋಪಾಲಸ್ವಾಮಿ ಬೆದರಿತ್ತು ಎನ್ನಲಾಗಿದೆ.