ಉಪ್ಪಿನಂಗಡಿ: ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಜಗದೀಶ್ ಎಂಬ ವಿಶ್ವ ಹಿಂದು ಪರಿಷದ್ ಕಾರ್ಯಕರ್ತನನ್ನು ಅ.10 ರಂದು ರಾತ್ರಿ ಠಾಣೆಗೆ ವಿನಾಕಾರಣ ಕರೆದುಕೊಂಡು ಹೋಗಿ, ದೈಹಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಯಾವುದೊ ಒಂದು ಘಟನೆಯನ್ನು ಕಾರಣವಾಗಿ ಮುಂದಿಟ್ಟುಕೊಂಡು ರಾತ್ರಿ ಪೂರ್ತಿ ಠಾಣೆಯಲ್ಲಿ ಕೂಡು ಹಾಕಿ, ಬಟ್ಟೆಕಳಚಿ ಠಾಣೆಯ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರು ದೊಣ್ಣೆಯಿಂದ ಹೊಡೆದು, ಬೂಟ್ ಕಾಲಿನಿಂದ ಹೊಡೆದದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು, ಅ.11 ರಂದು ಸೋಮವಾರ ಸಂಜೆ ಠಾಣೆಯಿಂದ ಬಿಟ್ಟು ಕಳಿಸಿದ್ದು, ಆ ಸಂದರ್ಭದಲ್ಲಿ ಅವರು ನಡೆಯಲಾಗದೆ ತುಂಬಾ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ನಿರಪರಾಧಿಯಾದ ಜಗದೀಶನ ಮೇಲೆ ವಿನಾಕಾರಣ ದೈಹಿಕವಾಗಿ ಹಲ್ಲೆ ನಡೆಸಿದ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರ ಮೇಲೆ ತಕ್ಷಣ ಕೇಸು ದಾಖಲಿಸಿ ಕಾನೂನುಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ರವರನ್ನು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಭೇಟಿ ಆರೋಗ್ಯ ವಿಚಾರಿಸಿದರು.