ಉತ್ತರ ಕನ್ನಡ: ಟ್ಯಾಂಕರ್ʼವೊಂದು ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಹೊರ ಚಾಚಿ ಭೀತಿಯ ವಾತವಾರಣಕ್ಕೆ ಕಾರಣವಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಇಡಗುಂದಿಯ ಬಳಿ ಅ.13 ರ ಮುಂಜಾನೆ ನಡೆದಿದೆ.
ಪೇಂಟ್‌ಗೆ ಬಳಸುವ ‘ಪೆಂಜೈನ್’ ರಾಸಾಯನಿಕವನ್ನು ಮಂಗಳೂರಿನಿಂದ ಮುಂಬೈಗೆ ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿತ್ತು. ಕಡಿದಾದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿ ಸೋರಿದ ರಾಸಾಯನಿಕವು ಪಕ್ಕದ ಹಳ್ಳ ಹಾಗೂ ಕಾಲುವೆಗಳಲ್ಲಿ ಹರಿದಿದೆ.
ಹಳ್ಳದ ಭತ್ತದ ಗದ್ದೆ, ಪಂಪ್ ಸೆಟ್ ಸುಟ್ಟು ಕರಕಲಾಗಿವೆ. ತೋಟದಲ್ಲಿದ್ದ ಗಿಡಗಳಿಗೂ ಬೆಂಕಿ ತಗುಲಿದೆ. ಟ್ಯಾಂಕರ್ ಚಾಲಕ, ಸಹ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಟ್ಯಾಂಕರ್ ಅಪಘಾತವಾಗುತ್ತಿದ್ದಂತೆ, ಸೋರಿದ ರಾಸಾಯನಿಕಕ್ಕೆ ಬೆಂಕಿ ತಗುಲಿದ ಸದ್ದು ಒಂದೆರಡು ಕಿಲೋಮೀಟರ್ ವರೆಗೂ ಕೇಳಿಸಿದೆ.
ಮನೆಗಳಲ್ಲಿದ್ದ ಜನ ಗಾಬರಿಯಿಂದ ಹೊರ ಬಂದು ನೋಡಿದರೆ ಹಳ್ಳ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಬಂದು ಕಂಗಾಲಾಗಿದ್ದಾರೆ ಅಪಘಾತ ಸ್ಥಳಕ್ಕೆ ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲ್ಲಾಪುರ ಪಿ.ಐ. ಸುರೇಶ್ ಯಳ್ಳೂರ್ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಪ್ರಿಯಾಂಕಾ ನ್ಯಾಮಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತರಲು ನೆರವಾದರು.