ಪುತ್ತೂರು: ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪದಡಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿ, ಇಬ್ಬರನ್ನು ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಆ.9 ರಂದು ರಾತ್ರಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ ಅಕ್ರಮ ಗಾಂಜಾ ಸಾಗಾಟ ಜಾಲ ಪತ್ತೆ ಮಾಡಿ ಸುಮಾರು 20 ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿತ್ತು.
ಆರೋಪಿಗಳಾದ ಕೇರಳ ಮೂಲದ ಮೂಸಾ ಅಡುಕಂ ಹಾಗೂ ಮಹಮ್ಮದ್ ಹ್ಯಾರೀಸ್ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಕಾವು ಪೇಟೆಯಿಂದ ಪುತ್ತೂರು ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ತಲಾ 2 ಕೆ.ಜಿಯ 10 ಪ್ಯಾಕೆಟ್ನಲ್ಲಿದ್ದ ಒಟ್ಟು 20.6 ಕೆ.ಜಿ. ಗಾಂಜಾ ಪತ್ತೆಯಾಗಿತ್ತು.ಗಾಂಜಾ ಸಮೇತ ಕಾರನ್ನು ವಶಪಡಿಸಿಕೊಂಡಿದ್ದರು.ಇದರ ಮೌಲ್ಯ ರೂ.8ಲಕ್ಷ ಆಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದರು.
ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿ ಬಿಡುಗಡೆ ಮಾಡಿದೆ.
ಆರೋಪಿಗಳ ಪರ ವಕೀಲ ಬಿ.ನರಸಿಂಹಪ್ರಸಾದ್ ರವರು ವಾದಿಸಿದರು.