ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪುತ್ತೂರು ಜಿಲ್ಲೆಯ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮವು ಅ.15ರಂದು ನಡೆಯಿತು.
ಪುತ್ತೂರಿನ ಹಳೇ ಪೊಲೀಸ್ ವಸತಿ ನಿಲಯ ರಸ್ತೆಯಲ್ಲಿರುವ ‘ಪಂಚವಟಿ’ಯಲ್ಲಿ ಕಾರ್ಯಕ್ರಮವು ಇಂದು ಬೆಳಗ್ಗೆ ಜರಗಿತು. 95 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಕಛೇರಿ ‘ಪಂಚವಟಿ’ ಹಲವಾರು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಕಾರ್ಯ ಚಟುವಟಿಕೆಗಾಗಿ ಇನ್ನೂ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇರುವುದರಿಂದ ನೂತನ ಕಟ್ಟಡ ನಿರ್ಮಾಣವಾಗಲಿದೆ.
ಭೂಮಿ ಪೂಜೆಗೆ ಪುತ್ತೂರಿನ ಪವಿತ್ರ ನದಿಗಳ ಜಲ ಮತ್ತು ಹಲವು ದೇವಸ್ಥಾನಗಳ ತೀರ್ಥ ಸಮರ್ಪಣೆ:
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಜಲ, ಸುವರ್ಣ ನದಿಯ ಜಲ, ಬೆಟ್ಟಂಪಾಡಿಯ ಕ್ಷೀರ ಹೊಳೆಯ ಜಲ, ಬಲ್ನಾಡು, ಮಿತ್ತಡ್ಕ, ಉಳ್ಳಾಲ್ತಿ ಹೊಳೆಯ ಜಲ, ಮೈತ್ರೇಯಿ ಗುರುಕುಲದ ತಟದಲ್ಲಿರುವ ಪಂಚಗಾಮಿನಿ ನದಿಯ ಜಲ, ಅಳದಂಗಡಿಯ ಫಲ್ಗುಣಿ ನದಿಯ ತೀರ್ಥ, ಕಪಿಲ ತೀರ್ಥ, ವಿಟ್ಲ ಪಂಚಲಿಂಗೇಶ್ವರ ಕ್ಷೇತ್ರದ ತೀರ್ಥ, ಸೂರ್ಯನಾರಾಯಣ ದೇವಸ್ಥಾನದ ತೀರ್ಥ, ವಿಟ್ಲದ ನರಹರಿ ಸದಾಶಿವ ದೇವಸ್ಥಾನದ ಶಂಖ, ಚಕ್ರ, ಗದಾ, ಪದ್ಮಾ ಕೆರೆಗಳ ತೀರ್ಥ, ವಿಟ್ಲದ ಕೊಡಂಗಾಯಿ ಅಲ್ಲಿನ ತೀರ್ಥವನ್ನು ಭೂಮಿ ಪೂಜೆಯ ಸಮಯದಲ್ಲಿ ಸಮರ್ಪಿಸಲಾಯಿತು.
ಸಂಘದ ಕೆಲಸ ನಮ್ಮ ಜವಾಬ್ದಾರಿ ಎಂಬ ಭಾವನೆ ಸಮಾಜದ ಜನರಲ್ಲಿ ಮೂಡಬೇಕು: ದಾ.ಮ.ರವೀಂದ್ರ
ಹಿಂದೂಗಳಲ್ಲೇ ಸಂಘಟನೆ ಆಗಬೇಕು, ಸಂಘಶಕ್ತಿ ಮತ್ತು ಸಜ್ಜನ ಶಕ್ತಿಗಾಗಿ ವೃದ್ಧಿಸಬೇಕು ಎಂಬ ಕಾರಣಕ್ಕಾಗಿ ಸಂಘ ಗತಿವಿಧಿಗಳ ಮೂಲಕ ಸಮಾಜವನ್ನು ತಲುಪುತ್ತಿದೆ. ದೇಶದ ಪ್ರತಿ ಮನೆಯೂ ಸಂಘದ ಮನೆಯಾಗಬೇಕು, ಸ್ವಯಂಸೇವಕನ ನಡವಳಿಕೆ ಮತ್ತು ವ್ಯವಹಾರದಿಂದ ಸ್ವಯಂಸೇವಕತ್ವ ಹೊರ ಜಗತ್ತಿಗೆ ಪರಿಚಯವಾಗಬೇಕು ಎಂಬ ಸಂಘದ ಧ್ಯೇಯಕ್ಕೆ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಬೇಕು. ಸಂಘ ಮಾಡುವ ಕೆಲಸ ನಮ್ಮ ಜವಾಬ್ದಾರಿ ಎಂದು ಅರಿತು ಸಮಾಜ ಮುಂದೆ ಬರೆಬೇಕು. ಸಂತರ ನೇತೃತ್ವದಲ್ಲಿ, ಸ್ವಯಂಸೇವಕರ ಬೆಂಬಲದಲ್ಲಿ ಸಮಾಜವನ್ನು ಮುನ್ನಡೆಸಬೇಕು ಎಂದು ರಾಷ್ಟ್ರೀಯ ಸ್ವಯಂಸ್ವೇವಕ ಸಂಘದ ಜ್ಯೇಷ್ಠ ಪ್ರಚಾರಕ ದಾ.ಮ.ರವೀಂದ್ರ ಹೇಳಿದರು.
ಸಮಾಜದ ಅಭಿವೃದ್ಧಿಗಾಗಿ ಸಮಯ ಕೊಡುವವರು, ಜೀವನವನ್ನು ಮುಡಿಪಾಗಿಡುವವರು ಅದರ ಉನ್ನತಿಯನ್ನು ಕಾಣದೆ ಮರೆಯಾಗಿದ್ದಾರೆ. ಮುಂದಿನ ಪೀಳಿಗೆ ಹಿಂದಿನವರ ಸಮರ್ಪಣೆಯ ಫಲವನ್ನು ಪಡೆಯುತ್ತಾರೆ. ಸಂಘದ ಸ್ವಯಂಸೇವಕರೂ ತಮ್ಮ ಸಮರ್ಪಣೆಯ ಗುಣದ ಕಾರಣಕ್ಕಾಗಿ ಸಮಾಜದಲ್ಲಿ ಧನಾತ್ಮಕವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜವನ್ನು ವಿಸ್ತಾರವಾಗಿ ನೋಡಿದಾಗ ಸಂಘ ಕಾರ್ಯದ ಅನಿವಾರ್ಯತೆ ಅರಿವಾಗುತ್ತದೆ ಎಂದು ನುಡಿದರು.
ಸಂಘ ಸ್ಥಾಪನೆಯಾಗಿ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸಂಘ ಪ್ರಾರಂಭವಾಗಿದ್ಯಾಕೆ? ಸಂಘ ಎಷ್ಟು ಜನರನ್ನು ತಲುಪಿದೆ? ಎಂಬಿತ್ಯಾದಿ ಪ್ರಶ್ನೆ ಇಂದು ಹಲವರಲ್ಲಿದೆ. ಯಾವುದೇ ಅನುಕೂಲಗಳಿಲ್ಲದೆ, ವಿದೇಶಿಗರ ಆಳ್ವಿಕೆಯ ಸಂದರ್ಭದಲ್ಲಿ, ವಿರೋಧವಿದ್ದಾಗ ಸಂಘಕಾರ್ಯವನ್ನು ಸಂಘದ ಸಂಸ್ಥಾಪಕ ಪ.ಪೂ.ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರರು ಪ್ರಾರಂಭ ಮಾಡಿದರು. ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಉನ್ನತ ಸ್ಥಾನದಲ್ಲಿದ್ದರೂ ಅವರು ಸಾಮಾನ್ಯ ವ್ಯಕ್ತಿ ದೇಶಭಕ್ತನಾಗಿ ಬದಲಾದಾಗ ದೇಶ ಬದಲಾಗುತ್ತದೆ ಎಂಬ ಗುರಿಯನ್ನಿಟ್ಟುಕೊಂಡು ಸಂಘಟನೆಯ ಕಾರ್ಯ ಪ್ರಾರಂಭ ಮಾಡಿದರು ಎಂದು ಅವರು ಅಭಿಪ್ರಾಯಪಟ್ಟರು.
ಸ್ವಯಂಸೇವಕತ್ವದ ಬಗ್ಗೆ ಡಾಕ್ಟರ್ ಜಿ ಹೆಚ್ಚು ಗಮನವಹಿಸಿದ್ದರು. ದೇಶ, ಸಮಾಜ, ಧರ್ಮ, ಸಂಸ್ಕೃತಿಯ ಕೆಲಸವನ್ನು ಯಾರು ಆದ್ಯತೆ ನೀಡಿ ಮಾಡುತ್ತಾರೋ ಅವರು ಸ್ವಯಂಸೇವಕರು. ಸಂಘಸ್ಥಾನದಿಂದಾಗಿ ಅರಳುವ ಭಾವ, ಅದು ಕಲಿಸಿದ ಸದ್ಗುಣ ಸಂಸ್ಕಾರದಿಂದ ವ್ಯಕ್ತಿ ನಿರ್ಮಾಣವಾಗುತ್ತದೆ. ಹೀಗೆ ನಿರ್ಮಾಣಗೊಂಡ ಸ್ವಯಂಸೇವಕರು ಸಮಾಜದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟು ಸಮಾಜಕ್ಕೆ ಸಮರ್ಪಿತ ವ್ಯಕ್ತಿಯಾಗಿ ಕಾಣಿಸಿಕೊಂಡ ಹಲವಾರು ನಿದರ್ಶನಗಳಿವೆ. ದೇಶದ ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲದೆ, ಇಕ್ಕಟ್ಟು-ಬಿಕ್ಕಟ್ಟಿನ ಸಂದರ್ಭದಲ್ಲೂ ಸ್ವಯಂಸೇವಕರ ಸ್ವಯಂಸೇವಕತ್ವ ಪ್ರಕಟವಾಗಿದೆ ಎಂದು ನುಡಿದರು.
ಸಂಘಸ್ಥಾನದಲ್ಲಿ ದೊರೆತ ಸಂಸ್ಕಾರವನ್ನು ನಮ್ಮ ಜೀವನದಲ್ಲಿ ನಾವು ಎಷ್ಟು ಅಳವಡಿಸಿಕೊಂಡಿದ್ದೇವೆ ಎನ್ನುವುದರ ಕುರಿತು ಗಮನವಹಿಸಿದಾಗಲೇ ಸಂಘದ ಸಾಮರ್ಥ್ಯ ಅರಿವಾಗುತ್ತದೆ. ಹೆಸರು, ಕೀರ್ತಿ, ಪ್ರಸಿದ್ಧಿ, ಸ್ಥಾನಮಾನ, ಅಧಿಕಾರ, ಹಣವನ್ನು ಬಯಸದೆ ಸ್ವಯಂಸೇವಕ ಕಾರ್ಯನಿರತನಾಗಬೇಕು. ಸಮಾಜಕ್ಕಾಗಿ ಸಮಯ ಸಮರ್ಪಣೆಯಲ್ಲಿ ನನ್ನ ಪಾತ್ರ ಎಷ್ಟು ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಸಂಘದ ಸ್ವಯಂಸೇವಕನನ್ನು ಅರ್ಥ ಮಾಡಿಕೊಂಡರೆ ಸಂಘವನ್ನು ಅರ್ಥ ಮಾಡಿಕೊಂಡಂತೆ. ಆದ್ದರಿಂದ ಕೇವಲ ಹೊರ ರೂಪದ ಸ್ವಯಂಸೇವಕರಾಗದೆ ಅಂತಃ ರಂಗದ ಸ್ವಯಂಸೇವಕರಾಗಬೇಕು ಎಂದರು
ಮಂಗಳೂರು ವಿಭಾಗದಲ್ಲಿ ಸಂಘ ಕಾರ್ಯ ಪ್ರಾರಂಭವಾಗಿ ಸುಮಾರು ೮೦ ವರ್ಷಗಳಾಗಿವೆ. ತುರ್ತು ಪರಿಸ್ಥತಿಯ ಸಂದರ್ಭದಲ್ಲಿ ಸರಸಂಘಚಾಲಕರ ಗಮನವನ್ನು ಸೆಳೆಯುವಲ್ಲಿ ಮಂಗಳೂರು ವಿಭಾಗ ತಮ್ಮ ಉತ್ಸಾಹದ ಮೂಲಕ ಯಶಸ್ವಿಯಾಗಿತ್ತು. ಅಯೋಧ್ಯೆಯ ಕರಸೇವೆಗಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಅನೇಕರು, ವಿಶೇಷವಾಗಿ ಇಲ್ಲಿನ ಮಹಿಳೆಯರು ಕೆಚ್ಚೆದೆಯ ಭಾವ ತೋರ್ಪಡಿಸಿದ್ದರು. ಇಲ್ಲಿನ ಸಂಘದ ಇತಿಹಾಸದಲ್ಲಿ ಪುತ್ತೂರು ಜಿಲ್ಲೆಯ ಸ್ವಯಂಸೇವಕರ ಪಾತ್ರ ಮುಖ್ಯವಾಗಿದೆ ಎಂದು ನುಡಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿಯ ನೇತೃತ್ವದಲ್ಲಿ ಪಂಚವಟಿಯ ಭೂಮಿ ಪೂಜನಾ ಕಾರ್ಯಕ್ರಮ ನಡೆದಿದೆ. ಆರ್.ಎಸ್.ಎಸ್. ಜ್ಯೇಷ್ಠ ಪ್ರಚಾರಕ ದಾ.ಮ.ರವೀಂದ್ರ ಶಿಲಾನ್ಯಾಸ ನೆರವೇರಿಸಿದರು. ಪ್ರಾಂತ ಸಂಘ ಚಾಲಕ ಡಾ.ಪಿ.ವಾಮನ ಶೆಣೈ, ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕುಟುಂಬ ಪ್ರಬೋಧನ್ ವಿಭಾಗದ ಅಖಿಲ ಭಾರತೀಯ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪುತ್ತೂರು ಜಿಲ್ಲಾ ಸಂಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಸಹಿತ ಹಲವರು ಭಾಗವಹಿಸಿದ್ದರು. ಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಿ.ಎಸ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.


































