ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ತಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ನೈಜ ಆರೋಪಿಯನ್ನು ಪ್ರಕರಣದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಒತ್ತಾಯ ಮಾಡಿದ ಮುಖಂಡ ಆನಂದ ಬೆಳ್ಳಾರೆ, ಎಫ್‌ಐಆರ್‌ನಲ್ಲಿ ನೈಜ ಆರೋಪಿಯ ಹೆಸರು ದಾಖಲಿಸದ ಬಗ್ಗೆ ಸ್ವತ: ಬಾಲಕಿಯೇ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದು, ಅದರಂತೆ ನೈಜ ಆರೋಪಿಯನ್ನು ಬಂಧಿಸಬೇಕು. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯು ಹೊರಗೆ ತರಲು ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಅ. 21ರಂದು ಸಂಪ್ಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬ ಅಲ್ಲಿನ ಭೂ ಮಾಲಕರ ಮನೆಗೆ ತೋಟದ ಕೆಲಸಕ್ಕೆ ಹೋಗುತ್ತಿತ್ತು. ಬಾಲಕಿಯ ಮನೆಯವರ ಅಸಹಾಯಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಆರೋಪಿ ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾಗಿದ್ದಾನೆ ಎಂದು ಅವರು ಆರೋಪಿಸಿದರು.
ಬಾಲಕಿಯು ಹೆರಿಗೆಯ ಸಮಯದಲ್ಲಿ ಆರೋಪಿಯ ಹೆಸರನ್ನು ತಿಳಿಸಿದ್ದರೂ ಸದ್ರಿ ಪ್ರಕರಣದಲ್ಲಿ ನೈಜ ಆರೋಪಿಯನ್ನು ಹೊರಗಿಡುವ ಪ್ರಯತ್ನ ನಡೆದಿದೆ. ಪುತ್ತೂರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಬಾಲಕಿಯ ಮನೆಗೆ ತೆರಳಿ ಕುಟುಂಬದವರಿಗೆ ಬೆದರಿಕೆ ಒಡ್ಡಿದ್ದಾರೆ. ಘಟನೆಗೆ ಸಂಬಂಧವಿಲ್ಲದ ವ್ಯಕ್ತಿಯನ್ನು ಆರೋಪಿಯೆಂದು ಸುಳ್ಳು ವರದಿ ಸೃಷ್ಟಿಸಿ ನೈಜ ಆರೋಪಿ ಪ್ರಕರಣದಿಂದ ನುಣುಚಿಕೊಳ್ಳಲು ಸಹಾಯ ಮಾಡಿದ್ದಾರೆ. ಎಂದು ಆನಂದ ಬೆಳ್ಳಾರೆ ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಅಶೋಕ್ ಕೊಂಚಾಡಿ, ರಘು ಕೆ. ಎಕ್ಕಾರು, ಯು.ಕೆ. ಗಿರೀಶ್ ಕುಮಾರ್ ಉಪಸ್ಥಿತರಿದ್ದರು.