ಮಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದ್ರೆ ಸಾರಿಗೆ ಸಂಸ್ಥೆಗಳು ಆರ್ಥಿಕ ಚೇತರಿಕೆ ಕಂಡಿಲ್ಲ. ಕೊರೊನಾ ಆರ್ಭಟ ತಗ್ಗಿದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಇದರಿಂದ ಮಂಗಳೂರು ವಿಭಾಗ ಸರಿ ಸುಮಾರು 37 ಕೋಟಿ ನಷ್ಟ ಅನುಭವಿಸುತ್ತಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗ್ತಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳ್ತಿದೆ. ಆದ್ರೆ, ಕೆಎಸ್ಆರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಾಣ್ತಿಲ್ಲ. ಇದರಿಂದ ರಾಜ್ಯ ಸಾರಿಗೆ ಸಂಸ್ಥೆಗಳು ಇನ್ನೂ ಅರ್ಥಿಕ ಚೇತರಿಕೆ ಕಂಡಿಲ್ಲ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ಕೋಟ್ಯಾಂತರ ರೂಪಾಯಿ ನಷ್ಟದಲ್ಲಿವೆ. ಸಂಸ್ಥೆಯ ನೌಕರರು ಸಂಬಳವಿಲ್ಲದೇ ಪರದಾಡುತ್ತಿದ್ದಾರೆ.
ಕರಾವಳಿ ಭಾಗದ ಕೆಎಸ್ಆರ್ಟಿಸಿ ವಿಭಾಗ ಕೂಡ ಇದರಿಂದ ಹೊರತಾಗಿಲ್ಲ. ಕೊರೊನಾ ಸಂಕಷ್ಟದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿದರೂ ಕರಾವಳಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದೆ.
ಕುಂದಾಪುರ, ಉಡುಪಿ ಸೇರಿದಂತೆ ಮಂಗಳೂರು ಡಿಪೋಗಳನ್ನು ಒಳಗೊಂಡಿರುವ ಮಂಗಳೂರು ಕೆಎಸ್ಆರ್ಟಿಸಿ ವಿಭಾಗ ದಿನಂಪ್ರತಿ ನಷ್ಟದಲ್ಲೇ ತೇಲ್ತಿದೆ. 2,340 ನೌಕರರನ್ನು ಹೊಂದಿರುವ ಮಂಗಳೂರು ಕೆಎಸ್ಆರ್ಟಿಸಿ ವಿಭಾಗ ಒಂದು ಅಂದಾಜಿನ ಪ್ರಕಾರ ಪ್ರತಿದಿನ 25 ಲಕ್ಷ ರೂಪಾಯಿ ನಷ್ಟ ಅನುಭವಿಸ್ತಿದೆ. ಕೋವಿಡ್ ಕಾರಣದಿಂದ ಕಳೆದ 5 ತಿಂಗಳಲ್ಲಿ ಮಂಗಳೂರು ವಿಭಾಗ ಸರಿ ಸುಮಾರು 37 ಕೋಟಿ ರೂಪಾಯಿ ನಷ್ಟದಲ್ಲಿದೆ.
ಒಂದೆಡೆ ಡೀಸೆಲ್ ದರ ಏರಿಕೆಯಾಗಿರುವುದು ಮತ್ತೊಂದೆಡೆ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಾಣದಿರುವುದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕಂಗೆಡಿಸಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಸಿಬ್ಬಂದಿಗಳ ಸಂಬಳ ನೀಡಲೂ ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.