ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ ಶಂಕರ್ರಾವ್ (84) ನಿಧನರಾಗಿದ್ದಾರೆ. ಸೋಮವಾರ (ಅ.18) ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ತುಮಕೂರಿನಲ್ಲಿ ಬಾಲ್ಯ ಮತ್ತು ಯೌವನ ಕಳೆದವರು ಶಂಕರ್ ರಾವ್. ಅಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದ ತೆಲುಗು ಸಿನಿಮಾಗಳನ್ನು ನೋಡಿ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ದಿನಗಳಿಂದಲೇ ಅವರು ನಟನೆಯಲ್ಲಿ ಅಭಿರುಚಿ ಹೊಂದಿದ್ದರು. 1956ರಲ್ಲಿ ಬೆಂಗಳೂರಿಗೆ ಬಂದರು. ‘ಗೆಳೆಯರ ಬಳಗ’ ಟೀಮ್ ಕಟ್ಟಿಕೊಂಡು ಶಂಕರ್ ರಾವ್ ನಾಟಕ ಮಾಡುತ್ತಿದ್ದರು. 19ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಮನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು.
ಪ್ರತಿ ವರ್ಷ ಸಿಗುತ್ತಿದ್ದ ಬೋನಸ್ ಹಣದಲ್ಲಿ ಹೊಸ ರಂಗ ತಂಡ ಕಟ್ಟಿಕೊಂಡರು. ‘ನಟರಂಗ’ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಂಡಿದ್ದರು. ಹವ್ಯಾಸಿ ರಂಗಭೂಮಿ ಕಲಾವಿದನಾಗಿದ್ದ ಅವರು ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕಿರುತೆರೆಯ ಜನಪ್ರಿಯ ‘ಪಾಪ ಪಾಂಡು’ ಧಾರಾವಾಯಿ ಮೂಲಕ ಕರುನಾಡಿನ ಜನರನ್ನು ಶಂಕರ್ ರಾವ್ ರಂಜಿಸಿದ್ದರು.