ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ್ ಭಟ್ ರವರ ಆರೋಗ್ಯದಲ್ಲಿ ಏರುಪೇರು ಆಗಿರುವ ನಿಟ್ಟಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
92ರ ಹರೆಯದ ಉರಿಮಜಲು ರಾಮ ಭಟ್ಟರವರು ವಯೋ ಸಹಜ ಅನಾರೋಗ್ಯದಲ್ಲಿದ್ದು, ಅವರನ್ನು ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ರಾಮ ಭಟ್‌ರವರನ್ನು ಕೊಂಬೆಟ್ಟಿನಲ್ಲಿರುವ ಅವರ ಮನೆಗೆ ಕರೆ ತರಲಾಗಿತ್ತು. ಮತ್ತೆ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯ ‘ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿರುವ ರಾಮ್ ಭಟ್ ರವರು ಜನಸಂಘದ ಪ್ರಭಾವಿ ನಾಯಕರಾಗಿ, ವಕೀಲರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋದ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರಿನ ಶಾಸಕರಾಗಿ, ಭಾರತೀಯ ಜನತಾ ಪಾರ್ಟಿಯ ಮುಂಚೂಣಿಯ ಮುಖಂಡರಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ರಾಮ ಭಟ್‌ರವರು ತನ್ನ ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಚಟುವಟಿಕೆಯಿಂದ ಕೂಡಿದ್ದರು. ಬಿಜೆಪಿ ವರಿಷ್ಠರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಸಹಿತ ಹಲವರ ಒಡನಾಡಿಯಾಗಿದ್ದ ರಾಮ ಭಟ್ಟರವರು ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿ ಜೈಲು ಸೇರಿದ್ದರು.
ರಾಮ ಭಟ್ ರವರು 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಂಡಾಯ ಘೋಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆರ್‌ಎಸ್‌ಎಸ್ ಸಹಿತ ಸಂಘ ಪರಿವಾರ, ಬಿಜೆಪಿಯ ಉನ್ನತ ನಾಯಕರ ರಾಜಿ ಸಂಧಾನಕ್ಕೂ ಬಗ್ಗದ ರಾಮ ಭಟ್‌ರವರು ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಠಿಸಿದ್ದರು.
ಬದಲಾದ ರಾಜಕಾರಣದ ಸಮಯದಲ್ಲಿ ನರೇಂದ್ರ ಮೋದಿಯವರಿಗೆ ನಮೋ ನಮಃ ಎಂದಿದ್ದ ರಾಮಭಟ್‌ರವರು ನಂತರದ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಿದ್ದರು. 2020ರ ಎಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ರಾಮ ಭಟ್ಟರವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಮತ್ತೆ ಬಿಜೆಪಿ ನಾಯಕರ ಜತೆ ಆಪ್ತರಾಗಿದ್ದರು.
ರಾಮ ಭಟ್ ರವರ ಮನೆಗೆ ಕೆಲವೇ ದಿನಗಳ ಹಿಂದೆ ಪುತ್ತೂರಿನ ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಸಹಿತ ಹಲವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿರುವ ರಾಮ ಭಟ್‌ರವರನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.