ಬೆಂಗಳೂರು: ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲ್ಮೆ„ ಸುಳಿಗಾಳಿ ಇರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.25ರ ವರೆಗೆ ಮುಂಗಾರು ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಒಣಹವೆ ಇರಲಿದ್ದು, ಅ.22ರಿಂದ 24ರ ವರೆಗೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆ ಸೇರಿದಂತೆ ಕೆಲವೆಡೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
26ರಂದು ಹಿಂಗಾರು ಪ್ರವೇಶ:
25ರಂದು ಮುಂಗಾರು ಮಾರುತಗಳು ಅಂತ್ಯವಾಗಲಿದ್ದು, 26 ಕ್ಕೆ ರಾಜ್ಯಕ್ಕೆ ಹಿಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ. ಸಾಮಾನ್ಯವಾಗಿ ಸೆ.30ಕ್ಕೆ ಮುಂಗಾರು ಅಂತ್ಯವಾಗಲಿದೆ. ಆದರೆ, ಈ ಬಾರಿ ಸಮುದ್ರದಲ್ಲಿನ ವಾಯುಭಾರ ಕುಸಿತ ಮತ್ತು ಮೇಲ್ಮೆ„ ಸುಳಿಗಾಳಿ ಬೀಸಿದ್ದರಿಂದ ಮುಂಗಾರು ಮಾರುತಗಳು ಇನ್ನೂ ಅಂತ್ಯವಾಗಿಲ್ಲ. ಅ.15ರ ವೇಳೆಗೆ ಮುಂಗಾರು ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಇದೀಗ ಮತ್ತೆ ಹತ್ತು ದಿನ ಮುಂದುವರಿದಿದ್ದು, 25 ರಂದು ಅಂತ್ಯವಾಗಲಿವೆ. 27ರಿಂದ ಹಿಂಗಾರು ಪ್ರವೇಶವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.