ಪುತ್ತೂರು: ಬೇಸಾಯ ಎನ್ನುವುದು ನಮ್ಮ ಪೂರ್ವಜರು ನಮಗೆ ನೀಡಿದ ಬಳುವಳಿ. ನಮ್ಮ ಅವಶ್ಯಕತೆಯ ಭತ್ತವನ್ನು ನಾವೇ ತಯಾರಿಸುವ ಪ್ರಾವೀಣ್ಯತೆಯನ್ನು ನಮ್ಮ ಯುವಜನತೆ ಪಡೆದುಕೊಂಡಾಗ ತನ್ನ ಅಭಿವೃದ್ಧಿಯಾಗುವುದಲ್ಲದೆ, ದೇಶದ ಅಭಿವೃದ್ಧಿಯು ಸಾಧಿಸಬಹುದು ಎಂದು ಪ್ರಗತಿಪರ ಕೃಷಿಕರಾದ ಶ್ರೀಮತಿ ಶೀಲಾವತಿ ತಾರಿಪಡ್ಪು ಹೇಳಿದರು.
ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಂದ ಬೆಳಿಯೂರುಕಟ್ಟೆಯ ತಾರಿಪಾಡ್ಪು ಎಂಬಲ್ಲಿ ನಡೆದ ಪೈರು ಕಟಾವು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾಹಿತಿ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಸಹಾ ಬೇಸಾಯದ ಕುರಿತು ಮಾಹಿತಿ ಪಡೆದುಕೊಂಡಿರಬೇಕು. ಮುಂದಿನ ದೇಶದ ಪ್ರಜೆಗಳಾಗಿರುವ ಇಂದಿನ ವಿದ್ಯಾರ್ಥಿಗಳಿಗೆ ಅದರ ಮಾಹಿತಿ ದೊರೆತಾಗ ಕೃಷಿ ನಡೆಸಲು ಅನುಕೂಲವಾಗುತ್ತದೆ. ಆ ಮೂಲಕ ದೇಶದ ಪ್ರತಿಯೊಬ್ಬನಿಗೂ ಅವಶ್ಯಕವಾಗಿರುವ ಕೃಷಿಯನ್ನು ಮುಂದುವರಿಸಲು ನಮ್ಮ ಯುವಜನಾಂಗ ಮುಂದೆ ಬರಬೇಕು ಎಂದರು.
ಕಾರ್ಯಕ್ರಮದ ಬಗ್ಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಘಟಕದ ಸಂಯೋಜಕ ಲಕ್ಷ್ಮಿಕಾಂತ ರೈ ಅನಿಕೂಟೇಲ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಎನ್ ಎಸ್ ಎಸ್ ಘಟಕದ ಸಹಾ ಸಂಯೋಜಕಿ ಕು. ಶ್ರೀರಕ್ಷಾ ವಂದಿಸಿದರು. ಉಪನ್ಯಾಸಕ ತಿಲಕ್, ಉಪನ್ಯಾಸಕರಾದ ಕೌಶಿಕ್ ಸಿ, ಹಿತ ದೇಚಮ್ಮ, ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್, ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ನಂತರ ಎನ್ ಎಸ್ ಎಸ್ ಸ್ವಯಂಸೇವಕರು ಪೈರು ಕಟಾವು ನಡೆಸಿದರಲ್ಲದೆ, ಬೇಸಾಯದ ಕುರಿತು ಸಂಪೂರ್ಣ ಮಾಹಿತಿಯನ್ನು ಗದ್ದೆಯ ಮಾಲೀಕರಾದ ಈಶ್ವರ ನಾಯ್ಕ ಟಿ ರವರಿಂದ ಪಡೆದುಕೊಂಡರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದಿಂದ ವಿನೂತನ ಪ್ರಯತ್ನ:
ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತೆ..? ಎಂದು ಮಕ್ಕಳು ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ನೆಲೆಯಿಂದಲೇ ಬೇಸಾಯದ ಪರಿಚಯವನ್ನು ಮಾಡಿಸಲು ವಿವೇಕಾನಂದ ಕಾನೂನು ಮಹಾವಿದ್ಯಾಲಯ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ತನ್ನ ವಿದ್ಯಾರ್ಥಿಗಳು ಪ್ರಾಯೋಗಿಕ ತಿಳುವಳಿಕೆ ಹೊಂದುವಂತಾಗಲು ಅವರನ್ನು ಗದ್ದೆಗಿಳಿಸಿ, ಬೇಸಾಯದ ವಿವಿಧ ಮಜಲುಗಳನ್ನು ಪರಿಚಯಿಸುವ ಜೊತೆಗೆ ವಿದ್ಯಾರ್ಥಿಗಳ ಮೂಲಕ ನಾಟಿ ಮಾಡಿಸುವಿಕೆ, ಪೈರು ಕಟಾವು ಮಾಡಿಸುವ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸುತ್ತಿದೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕವು ತನ್ನ ಸ್ವಯಂಸೇವಕರನ್ನು ಗದ್ದೆಗಿಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಕೃಷಿಯ ಖುಷಿಯನ್ನು ಸ್ವಅನುಭವದಿಂದ ಪಡೆಯುವಂತೆ ಈ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ.