ಪುತ್ತೂರು: ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು, ಪುತ್ತೂರು ಜಿಲ್ಲೆ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳ ದ್ವಂಸ, ಹಿಂದೂ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆ ಮತ್ತು ದೇಶದಲ್ಲಿ ನಡೆಯುತ್ತಿರುವ ಮತಾಂತರವನ್ನು ಖಂಡಿಸಿ ಅ.22 ರಂದು ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗ ‘ಪ್ರತಿಭಟನೆ’ ನಡೆಯಿತು. ಪ್ರತಿಭಟನೆಯ ಬಳಿಕ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ಅವರ ಮೂಲಕ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನವರಾತ್ರಿಯ ದುರ್ಗಾಪೂಜೆಯಿಂದ ಪ್ರಾರಂಭವಾಗಿ ಇಲ್ಲಿಯತನಕ ಪ್ರತಿದಿನವೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯತ್ತಿರುವ ಹಲ್ಲೆ, ಪ್ರಾಣಹಾನಿ, ಮಂದಿರಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದ್ದು, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾಪೂಜೆಯ ಪೆಂಡಾಲುಗಳ ಮೇಲೆ ಜಿಹಾದಿ ದಾಳಿ, ದುರ್ಗೆಯ ಮೂರ್ತಿಗಳ ಧ್ವಂಸ ಹಾಗೂ ಪೆಂಡಾಲುಗಳ ನಾಶದೊಂದಿಗೆ ಪ್ರಾರಂಭವಾದ ಹಿಂದೂಗಳ ಹಾಹಾಕಾರ ಇನ್ನೂ ನಿಂತಿಲ್ಲ, ಕುರಾನ್ ಗೆ ಯಾರೋ ಅಪಮಾನ ಮಾಡಿದ್ದಾರೆ ಎಂಬ ಗಾಳಿಸುದ್ಧಿ ಹಿಂದೂ ಮಂದಿರಗಳ ನಾಶಕ್ಕೆ ಕಾರಣವಾಗುತ್ತದೆ.
ಹಿಂದೂಗಳ ಮನೆಗಳನ್ನು ಸುಡಲಾಗುತ್ತದೆ. ಎಂದರೆ ಇದರ ಹಿಂದೆ ಇರುವ ಸಂಚು ಇರುವುದು ಕಾಣುತ್ತದೆ.ಬಾಲಕಿಯನ್ನು ಬಿಡದೆ ಹಿಂದೂ ಹೆಣ್ಣುಮಕ್ಕಳ ಮೇಲೆ ನಡೆದಿರುವ ಅತ್ಯಾಚಾರಗಳು ಬಾಂಗ್ಲಾದಲ್ಲಿ ಹಿಂದೂಗಳ ಬದುಕನ್ನು ಅಸಹನೀಯಗೊಳಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಎಲ್ಲಾ ಹಿಂಸೆ ಅತ್ಯಾಚಾರಗಳನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ತರಬೇಕು. ಬಾಂಗ್ಲಾದೇಶಕ್ಕೆ ಒಂದು ನಿಯೋಗವನ್ನು ಕಳಿಸಿ ಅಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಅಲ್ಪಸಂಖ್ಯಾತನಾಗಿರುವ ಹಿಂದೂವಿನ ರಕ್ಷಣೆಗಾಗಿ ಹೊಸ ಕಾನೂನು ತರಲು ಬಾಂಗ್ಲಾ ಸರಕಾರಕ್ಕೆ ಒತ್ತಾಯಿಸಬೇಕು. ಅಲ್ಲಿನ ಹಿಂದೂಗಳಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಲು ಭಾರತ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.