ಮಡಿಕೇರಿ: ತಮಿಳುನಾಡು ಮೂಲದ ವಿದ್ಯಾರ್ಥಿನಿಯೊಬ್ಬಳು ಹೋಂಸ್ಟೇಯೊಂದರಲ್ಲಿ ಸಾವಿಗೀಡಾಗಿರುವ ಘಟನೆ ಅ.25 ರಂದು ನಡೆದಿದೆ.
ತಮಿಳುನಾಡಿನ ಒಟ್ಟು ಐದು ಮಂದಿ ವಿದ್ಯಾರ್ಥಿನಿಯರು ಕೊಡಗು ಪ್ರವಾಸಕ್ಕಾಗಿ ನಗರಕ್ಕೆ ಆಗಮಿಸಿದ್ದು, ಇಲ್ಲಿನ ಡೈರಿ ಫಾಮ್೯ನಲ್ಲಿರುವ ಹೋಂಸ್ಟೇ ಒಂದರಲ್ಲಿ ತಂಗಿದ್ದರೆನ್ನಲಾಗಿದೆ. ಈ ಪೈಕಿ ಸ್ನಾನಕ್ಕೆಂದು ಬಾತ್ ರೂಂಗೆ ತೆರಳಿದ ವಿದ್ಯಾರ್ಥಿನಿಯೊಬ್ಬಳು ಬಹಳ ಹೊತ್ತಾದರೂ ಹೊರಬರದಿದ್ದಾಗ ಸಂಶಯಗೊಂಡ ಸಹಪಾಠಿಗಳು ಬಾತ್ ರೂಂಗೆ ತೆರಳಿ ನೋಡಿದಾಗ ಆಕೆ ಕೆಳಗೆ ಬಿದ್ದಿರುವುದು ಗೋಚರಿಸಿದೆ.ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಆಕೆ ಸಾವಿಗೀಡಾಗಿದ್ದಳೆಂದು ಹೇಳಲಾಗಿದೆ.
ಹೋಂಸ್ಟೇಯ ಕಿರಿದಾದ, ಹೆಚ್ಚು ಗಾಳಿಯಾಡದ ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಇರಿಸಲಾಗಿದ್ದು, ಗ್ಯಾಸ್ ಸಿಲಿಂಡರ್ ಆನ್ ಮಾಡಿ ಅರ್ಧ ಗಂಟೆ ಬಳಿಕ ಕಿರಿದಾದ ಬಾತ್ ರೂಮಿಗೆ ವಿದ್ಯಾರ್ಥಿನಿ ತೆರಳಿದ್ದಳೆನ್ನಲಾಗಿದೆ.ಗಾಳಿ ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಬಾತ್ ರೂಂನಲ್ಲಿ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಆಕೆ ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.
ಮೃತ ವಿದ್ಯಾರ್ಥಿನಿಯ ಪೋಷಕರು ಮಡಿಕೇರಿಗೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


























