ಫೇಸ್‌ಬುಕ್ (Facebook) ಕಾರ್ಪೊರೇಟ್ ಕಂಪನಿಯ ಹೆಸರನ್ನು ಗುರುವಾರ ಬದಲಾವಣೆ ಮಾಡಿದೆ. ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ (Meta) ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಘೋಷಣೆ ಮಾಡಿದ್ದಾರೆ. ಮೆಟಾ ಸಾಮಾಜಿಕ ಜಾಲತಾಣವನ್ನು (Social Media) ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದಿರುವ ಇವರು ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ. ಇದರಲ್ಲಿ ನಮ್ಮ ಅಪ್ಲಿಕೇಷನ್‌ಗಳು ಹಾಗೂ ಅವರು ಬ್ರಾಂಡ್‌ಗಳು ಬದಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಅನ್ನು ಈಗ ಮೆಟಾ (Facebook New Name Meta) ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. meta.com ಪ್ರಸ್ತುತ meta.org ಗೆ ಮರುನಿರ್ದೇಶಿಸುತ್ತದೆ, ಇದು ಚಾನ್ ಜುಕರ್‌ಬರ್ಗ್ ಇನಿಶಿಯೇಟಿವ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಯೋಮೆಡಿಕಲ್ ಸಂಶೋಧನಾ ಅನ್ವೇಷಣೆ ಸಾಧನವಾಗಿದೆ ಎಂದು ತಿಳಿದು ಬಂದಿದೆ.
‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ’ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.
ಮೆಟಾವರ್ಸ್ ಎಂದರೇನು?: ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚ್ಯುವಲ್ ಪ್ರಪಂಚದ ಜನರನ್ನು ಉದ್ದೇಶಿಸಿ ಅಮೆರಿಕದ ಕಾದಂಬರಿಕಾರ ನೀಲ್ ಸ್ಟೆಫನ್ಸನ್ ಅವರು ಮೆಟಾವರ್ಸ್ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದರು. ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ.