ಮಂಗಳೂರು : ಆದಾಯಕ್ಕಿಂತ ಹೆಚ್ಚಿನ ಸಂಪಾದನೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಎಸ್.ಇ. ಮಂಜುನಾಥ ಸ್ವಾಮಿಗೆ 5 ವರ್ಷ ಸಜೆ ಮತ್ತು 35 ಲಕ್ಷ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯ ತೀರ್ಪು ನೀಡಿದೆ.
ಮಂಜುನಾಥ ಸ್ವಾಮಿ ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಲೋಕಾ ಯುಕ್ತ ಪೊಲೀಸರು 2007ರಲ್ಲಿ ಅವರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಬಗ್ಗೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಸಮಗ್ರ ವಿಚಾರಣೆ ನಡೆಸಿ ಅಪರಾಧ ಸಾಬೀತುಪಡಿಸಿ ಅಂತಿಮ ತೀರ್ಪು ನೀಡಿದ್ದಾರೆ. ಅಪರಾಧಿಗೆ 5 ವರ್ಷ ಸಾದಾ ಸಜೆ ಹಾಗೂ 35 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆ 1ವರ್ಷಗಳ ಸಾದ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪು ಹೇಳಿದೆ.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿದ್ದ ಪ್ರಸನ್ನ ವಿ. ರಾಜು ದೂರು ನೀಡಿದ್ದು, ಲೋಕಾಯುಕ್ತ ಡಿವೈಎಸ್ಪಿ ಆಗಿದ್ದ ಸದಾನಂದ ವರ್ಣೇಕರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.