ಸುಬ್ರಹ್ಮಣ್ಯ: ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತನೊಬ್ಬನಿಗೆ ಹಲ್ಲೆ ನಡೆಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅ.27ರಂದು ಬಾಲಕನೊಬ್ಬ ಲೀಸ್‌ಗೆ ತೆಗೆದುಕೊಂಡ ಅಡಿಕೆ ತೋಟದಿಂದ 20ರಿಂದ 25 ಕೆ.ಜಿ ಹಣ್ಣು ಅಡಿಕೆಯನ್ನು ಮಾರಲೆಂದು ಗುತ್ತಿಗಾರು ಪೇಟೆಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ದಿನೇಶ್, ಈಶ್ವರ್, ಚಂದ್ರ, ಚೇತನ್ ಎಂಬುವವರು ಈ ಅಡಿಕೆಯನ್ನು ಈಶ್ವರ ಎಂಬವರ ತೋಟದಿಂದ ಕದ್ದು ತಂದಿದ್ದೀಯಾ ಎಂದು ಪ್ರಶ್ನಿಸಿದಾಗ ಬಾಲಕ ಇಲ್ಲ ನಾವು ಲೀಸ್‌ಗೆ ತೆಗೆದುಕೊಂಡ ತೋಟದಿಂದ ತಂದಿದ್ದು ಎಂದು ಹೇಳಿದರೂ ಕೇಳದ ತಂಡ ನೀನು ಅಡಿಕೆ ಕದ್ದು ಮಾರಾಟ ಮಾಡುತ್ತಿದ್ದಿಯಾ ಎಂದು ಅಂಗಿ ಹರಿದು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಜೊತೆಗೆ ನೀನು ಏನಾದರೂ ಪೊಲೀಸ್ ಕಂಪ್ಲೈಂಟ್ ಕೊಟ್ಟರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ. ಹಲ್ಲೆ ನಡೆಸಿದಾಗ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು.
ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿಡಿಯೋ ವೈರಲ್ ಆಗಿ ಪ್ರಕರಣ ದಾಖಲಾಗುತ್ತಿದ್ದಂತೇ ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.ಇನ್ನು ತಲೆಮರೆಸಿಕೊಂಡ ಆರೋಪಿಗಳಿಗಾಗಿ ಸುಬ್ರಹ್ಮಣ್ಯ ಪೊಲೀಸರು ಬಲೆ ಬೀಸಿದ್ದಾರೆ.