ವಿಟ್ಲ : ಮಹಿಳೆ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದ ಸಂದರ್ಭ ಆರು ಜನರ ತಂಡ ಅಕ್ರಮವಾಗಿ ಪ್ರವೇಶಿಸಿ ಜೀವಬೆದರಿಕೆ ಹಾಕಿ, ಅದೇ ರಾತ್ರಿ ಮನೆಗೆ ನುಗ್ಗಿ, ವಾಮಾಚಾರ ನಡೆಸಿ ಸೊತ್ತುಗಳನ್ನು ಕಳವುಗೈದು ಕುಡಿಯುವ ನೀರಿಗೆ ವಿಷ ಹಾಕಿ ಮನೆಯ ಬಾಗಿಲು ಮುರಿದು ಸರಕಾರಿ ಬಾವಿಗೆ ಎಸೆದಿರುವ ಘಟನೆಯೊಂದು ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ನಡೆದಿದೆ.
ಈ ಬಗ್ಗೆ ಜೀವಭಯದಿಂದ ತತ್ತರಿಸಿದ ಮನೆಯವರಾದ ಯಾದವ ಸಾಲ್ಯಾನ್ ಪತ್ನಿ ಸುಜಾತ, ವಿಟ್ಲ ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ನಿವಾಸಿ ರಾಮ ಎಂಬವರ ಪುತ್ರ ಚಂದ್ರಹಾಸ, ಮೋನಪ್ಪ ರ ಪುತ್ರ ಪ್ರವೀಣ, ಪ್ರಸಾದ್, ನಂದಕಿಶೋರ್, ಕಿಟ್ಟು ರವರ ಪುತ್ರ ಪದ್ಮನಾಭ ಮತ್ತು ವಾಸು ಎಂಬವರ ಪುತ್ರ ಲೋಕೇಶ್ ವಿರುದ್ಧ ಸುಜಾತ ದೂರು ನೀಡಿದ್ದಾರೆ.
ತನ್ನ ಪತಿ ಯಾದವ ಸಾಲ್ಯಾನ್ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ವೇಳೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು ನನಗೆ ಮತ್ತು ಪುಟ್ಟ ಮಕ್ಕಳಿಗೆ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಕಂಗಾಲಾದ ನಾನು ಮತ್ತು ಮಕ್ಕಳು ಪತಿಯ ತಂದೆ(ಮಾವ) ಡೊಂಬಯ್ಯ ಪಂಡಿತರ ಮನೆಗೆ ಹೋಗಿ ಆಶ್ರಯ ಪಡೆದಿದ್ದು, ರಾತ್ರಿ ಪತಿ ಬಂದ ಬಳಿಕ ವಿಚಾರ ತಿಳಿಸಿ ಅಲ್ಲೇ ಮಲಗಿದ್ದೆವು. ಮರುದಿನ ತಮ್ಮ ಮನೆಗೆ ಬಂದಾಗ ಆರೋಪಿಗಳು ಮನೆಯ ಬಾಗಿಲು ಮುರಿದು ವಾಮಾಚಾರ ನಡೆಸಿದ್ದಲ್ಲದೇ ಕುಡಿಯುವ ನೀರಿಗೆ ವಿಷ ಹಾಕಿ ಸೊತ್ತುಗಳನ್ನು ಹೊತೊಯ್ದಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಮನೆಯ ಬಾಗಿಲನ್ನು ಅಲ್ಲೇ ಪಕ್ಕದ ಸರಕಾರಿ ಬಾವಿಗೆ ಎಸೆದು ಹೋಗಿದ್ದು, ನಾನು ದೂರು ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಾ ಆರೋಪಿಗಳು ಎಸಗಿದ್ದ ದುಷ್ಕೃತ್ಯವನ್ನು ಗಮನಿಸಿ ಫೋಟೋ ಮತ್ತು ವಿಡಿಯೋ ಮಾಡಿದ್ದರೂ ಠಾಣೆಗೆ ದೂರು ನೀಡಿ ಐದು ದಿನಗಳಾದರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಸುಜಾತ ಕುಟುಂಬದ ಆಂತಕವನ್ನು ಮತ್ತಷ್ಟು ಹೆಚ್ಚುಗೊಳಿಸಿದೆ.