ಪುತ್ತೂರು: ಸುಮಾರು 31 ವರ್ಷಗಳ ಹಿಂದೆ ದಾರಂದಕುಕ್ಕುವಿನಲ್ಲಿ ರಿಕ್ಷಾ ಚಾಲಕನಿಗೆ ಬಾಡಿಗೆದಾರರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಓರ್ವ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
1990 ರ ಸೆ.26 ರಂದು ನಾರಾಯಣ ಗೌಡ ಎಂಬವರ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಪಡಿಸಿದ ಸುಲೈಮಾನ್ ಮತ್ತು ಪದ್ಮ ನೆಲ್ಲಿಕಟ್ಟೆ ಎಂಬವರು ದಾರಂದಕುಕ್ಕು ಸಮೀಪ ರಿಕ್ಷಾ ಚಾಲಕ ನಾರಾಯಣ ಗೌಡ ರಿಗೆ ಹಲ್ಲೆ ನಡೆಸಿದ್ದರು.
ಘಟನೆಗೆ ಸಂಬಂಧಿಸಿ ಆರೋಪಿಗಳಾದ ಸುಲೈಮಾನ್ ಮತ್ತು ಪದ್ಮ ನೆಲ್ಲಿಕಟ್ಟೆ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ನ್ಯಾಯಾಲಯದ ಜಾಮೀನು ಪಡೆದು ಹೊರ ಬಂದ ಆರೋಪಿಗಳ ಪೈಕಿ ಪದ್ಮ ನೆಲ್ಲಿಕಟ್ಟೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದರು. ಸುಲೈಮಾನ್ ಕಳೆದ 22 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯ ಸುಲೈಮಾನ್ ವಿರುದ್ದ ವಾರಂಟ್ ಜಾರಿ ಮಾಡಿತ್ತು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆ ಆರೋಪಿಯ ಪತ್ತೆ ಕಾರ್ಯ ಮಾಡುತ್ತಿದ್ದು, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರ ನಿರ್ದೇಶನದಂತೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮತ್ತು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಲ್ಲಿ ಆರೋಪಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನೂರು ತಾಲೂಕಿನ ಚೆರುಪುಝ ಪೊಲೀಸ್ ಠಾಣಾ ವ್ಯಾಪ್ತಿಯ ಪಾಡಿಚಾಲ್ ನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ನ.5 ರಂದು ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರ, ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ.6 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.