ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ಜಯಗಣೇಶ ಬೀಡು ಎಂಬವರ ಮನೆಯಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್ ಬೆಡ್‌ರೂಮಿನ ಕೀ ತೆಗೆದು ಒಳಪ್ರವೇಶಿಸಿ, ಕಪಾಟನ್ನು ಹಾಗೂ ಲಾಕರ್‌ನ್ನು ಬಲಾತ್ಕಾರವಾಗಿ ಮೀಟಿ ತೆಗೆದು ಕಳ್ಳತನವೆಸಗಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳೆಗಳು, ಮುತ್ತಿನ ಸರ, ಉಂಗುರ, ವಜ್ರದ ಕಿವಿ ಓಲೆ, ನೆಕ್ಲೇಸ್ ಮುಂತಾದ ರೂ. 14 ಲಕ್ಷ ಮೌಲ್ಯದ 332 ಗ್ರಾಂ ತೂಕ ಚಿನ್ನಾಭರಣಗಳು ಹಾಗೂ ಗೆಸ್ಟ್ ರೂಮಿನ ಕಪಾಟಿನ ಲಾಕರ್ ಒಡೆದು ಅದರಲ್ಲಿದ್ದ ರೂಪಾಯಿ. 3,00,000 ಹಣವನ್ನು ಮತ್ತು ಸುಮಾರು 1,35,000 ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 18,35,000 ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.