ವಿಟ್ಲ: ಕೊಳ್ನಾಡು ಪಂ.ನ ಪ್ರಥಮ ಗ್ರಾಮಸಭೆ ಸಾಲೆತ್ತೂರು ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಪಂ.ಅಧ್ಯಕ್ಷೆ ನೆಬಿಸಾ ಖಾದರ್ ಅವರು ಗ್ರಾಮ ಸಭೆಯ ಅಧ್ಯಕ್ಷರಾಗಿಯೂ, ನೋಡಲ್ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ರವಿಕುಮಾರ್ ಭಾಗವಹಿಸಿದ್ದರು.
ಸಭೆಯಲ್ಲಿ ಪಿ.ಡಿ.ಒ. ರೋಹಿಣಿ ಕಳೆದ ಸಾಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಆಯಿಶಾಬಾನು ಕಳೆದ ಸಾಲಿನ ಆಯ-ವ್ಯಯ ಮಂಡಿಸಿದರು. ಪಂ.ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಪಂ. ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಇದಾದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಬೀದಿನಾಯಿಗಳ ಉಪಟಳ ಮಿತಿಮೀರಿದ ಕಾರಣಕ್ಕಾಗಿ ಪಂ.ವತಿಯಿಂದ ಶೀಘ್ರವೇ ಉಚಿತ ಹುಚ್ಚುನಾಯಿ ಲಸಿಕಾ ಶಿಬಿರ ನಡೆಸಬೇಕೆಂಬ ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು.
ಸಾಲೆತ್ತೂರು ಮೆಸ್ಕಾಂ ಇಲಾಖೆಯ ಪರವಾಗಿ ಪಡಿಬಾಗಿಲು ಮೆಸ್ಕಾಂ ಅಧಿಕಾರಿ ಆನಂದ ಭಾಗವಹಿಸಿದ್ದರು. ಇವರು ಮಾತನಾಡಲು ಆರಂಭಿಸುತ್ತಿದ್ದಂತೆ ಸಾಲೆತ್ತೂರು ಮೆಸ್ಕಾಂ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಅಧಿಕಾರಿ ಆನಂದರನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರಿಂದ ವ್ಯಕ್ತವಾದ ಆರೋಪಗಳ ಸುರಿಮಳೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸಲಾಗದ ಮೆಸ್ಕಾಂ ಅಧಿಕಾರಿ ಆನಂದ ತುಟಿಪಿಟಿಕ್ಕೆನ್ನದೇ ದಾಳಿ ಎದುರಿಸಬೇಕಾಯಿತು. ಇದಾದ ಬಳಿಕ ಸಾಲೆತ್ತೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಮಾತನಾಡಲು ಆರಂಭಿಸುತ್ತಿದ್ದಂತೆ ಗ್ರಾಮಸ್ಥರು ಮತ್ತಷ್ಟು ಆಕ್ರೋಶ ವ್ಯಕ್ತ ಪಡಿಸಿದರು.
ಹದಿನೇಳು ಸಾವಿರ ಗ್ರಾಹಕರನ್ನು ಹೊಂದಿರುವ ಸಾಲೆತ್ತೂರು ಕೆನರಾ ಬ್ಯಾಂಕ್ (ಹಿಂದಿನ ಸಿಂಡಿಕೇಟ್ ಬ್ಯಾಂಕ್) ಅವ್ಯವಸ್ಥೆಯ ಆಗರವಾಗಿದೆ. ದಿನದ 24ಗಂಟೆ ಸೇವೆ ನೀಡಬೇಕಿದ್ದ ಎಟಿಯಂ ಸಂಜೆ ಆರು ಗಂಟೆ ಬಳಿಕ ಬಂದಾಗಿದೆ. ರಜಾ ದಿನಗಳಲ್ಲಿ ಎಟಿಯಂ ಬಂದಾಗುತ್ತಿರುವ ಕಾರಣ ತಕ್ಷಣವೇ ಎಟಿಯಂನ ಸಾಲೆತ್ತೂರು ಮೈದಾನದ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ. ಅಲ್ಲದೇ ಬ್ಯಾಂಕ್ ಸಿಬ್ಬಂದಿಗಳು ಅನ್ಯ ರಾಜ್ಯದವರಾಗಿರುವ ಕಾರಣ ಭಾಷಾ ಸಮಸ್ಯೆ ತಲೆದೋರಿದೆ. ಗ್ರಾಮೀಣ ಪ್ರದೇಶದ ಗ್ರಾಹಕರು ತಮ್ಮ ವ್ಯವಹಾರಗಳಿಗೆ ಶಾಖೆಗೆ ಬಂದ ಸಂದರ್ಭ ಸಿಬ್ಬಂದಿಗಳು ಉದ್ಧಟತನದಿಂದ ವರ್ತಿಸುತ್ತಾರೆ. ಶಾಖೆಯ ಒಳಭಾಗದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಗ್ರಾಹಕರು ಒದ್ದಾಡುತ್ತಿದ್ದಾರೆ. ಮಹಿಳಾ ಗ್ರಾಹಕರೊಂದಿಗೆ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂಬಿತ್ಯಾದಿ ನೂರಾರು ಆರೋಪಗಳು ಗ್ರಾಹಕರಿಂದ ಕೇಳಿಬಂದಿತು.
ಪಂ.ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಗ್ರಾಮಸ್ಥರ ಆರೋಪಗಳಿಗೆ ಉತ್ತರಿಸುತ್ತಾ ಪಂ. ನೇತೃತ್ವದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಮೈದಾನದಲ್ಲಿನ ಕಟ್ಟಡಕ್ಕೆ ಎಟಿಯಂ ಸ್ಥಳಾಂತರ ಮಾಡುವಂತೆ ನಿರ್ಣಯ ಕೈಗೊಂಡರು.