ಮಂಗಳೂರು: ನಿವೃತ್ತ ಶಿಕ್ಷಕಿಯೋರ್ವರ ಬ್ಯಾಂಕ್ ಖಾತೆಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚಿಸಿದ ಬ್ಯಾಂಕ್ ಸಿಬ್ಬಂದಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷಗಳ ಸಜೆ ಹಾಗೂ 15,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬ್ಯಾಂಕ್ ಉದ್ಯೋಗಿ ಗ್ರೇಸ್ ಫೆರ್ನಾಂಡಿಸ್ ಶಿಕ್ಷೆಗೊಳಗಾದವರು. ಈಕೆ ತೆರೆಸಾ ಡಿಸೋಜಾ ಎಂಬವರಿಗೆ 5 ಲಕ್ಷ ರೂ.ಗಳಿಗೂ ಅಧಿಕ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಘಟನೆ ಹಿನ್ನೆಲೆ:
ತೆರೆಸಾ ಡಿಸೋಜಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ತೆರೆಸಾ ಡಿಸೋಜಾ 2006-07 ಮತ್ತು 2008-09ನೇ ವರ್ಷದಲ್ಲಿ ತಮ್ಮ ಪಿಂಚಣಿ ಹಣ ಸೇರಿದಂತೆ ತನ್ನಲ್ಲಿದ್ದ ಮೊತ್ತವನ್ನು ನಗರದ ಮಿಲಾಗ್ರಿಸ್ ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಯಲ್ಲಿ ಠೇವಣಿಯಾಗಿ ಇಡಲು ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ಪರಿಚಯದ ಗ್ರೇಸ್ ಫೆರ್ನಾಂಡಿಸ್‌ರ ಸಹಾಯ ಪಡೆದುಕೊಂಡಿದ್ದರು.
ಗ್ರೇಸ್ ಫೆರ್ನಾಂಡಿಸ್‌ರ ಮೇಲೆ ನಂಬಿಕೆ ಇರಿಸಿ ಬ್ಯಾಂಕ್ ವ್ಯವಹಾರವನ್ನು ಅವರ ಮುಖಾಂತರವೇ ಮಾಡಿಕೊಳ್ಳುತ್ತಿದ್ದರು. ಬಳಿಕ ತೆರೆಸಾ ಡಿಸೋಜಾ ಚೆಕ್‌ಬುಕ್‌ನ್ನು ಕೂಡ ಗ್ರೇಸ್ ಅವರೇ ಪಡೆದುಕೊಂಡಿದ್ದರು. ಗ್ರೇಸ್ ಅವರು ಠೇವಣಿ ಇಡಲು ನೀಡಿದ ಮೊತ್ತದ ವಿವರವನ್ನು ಪಾಸ್‌ಬುಕ್‌ನಲ್ಲಿ ಕಂಪ್ಯೂಟರೀಕೃತವಾಗಿ ನೋಂದಣಿ ಮಾಡದೆ ಕೈಯಲ್ಲೇ ಬರೆದುಕೊಡುತ್ತಿದ್ದರು. ಬ್ಯಾಂಕ್ ಖಾತೆಗೆ ಹಾಕದೆ ವಂಚಿಸುತ್ತಿದ್ದರು. ತೆರೆಸಾ ಡಿಸೋಜ ಅವರು ಎಫ್‌ಡಿಗೆ ಹಾಕಲೆಂದು ಹಣ ನೀಡಿದಾಗ ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಶೀದಿ ನೀಡಿದ್ದರು.
ತೆರೆಸಾ ಅವರು ಬ್ಯಾಂಕ್‌ಗೆ ಹೋದಾಗ ಅಂದು ಗ್ರೇಸ್ ಅವರು ಬ್ಯಾಂಕ್‌ನಲ್ಲಿ ಇರಲಿಲ್ಲ. ತೆರೆಸಾ ಅವರು ಬ್ಯಾಂಕ್‌ನಲ್ಲಿ ತನ್ನ ಖಾತೆಯ ಬಗ್ಗೆ ವಿಚಾರಿಸಿದಾಗ ಅವರ ಖಾತೆಯಲ್ಲಿ ಇರಬೇಕಾಗಿದ್ದ 5,46,650 ರೂ. ಬದಲು ಕೇವಲ 15,571 ರೂ. ಮಾತ್ರ ಇತ್ತು. ಈ ಬಗ್ಗೆ ತೆರೆಸಾ ಅವರು ಗ್ರೇಸ್ ಮನೆಗೆ ಹೋಗಿ ವಿಚಾರಿಸಿದಾಗ ಗ್ರೇಸ್ ಮತ್ತು ಆಕೆಯ ಪತಿ ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು 4 ವರ್ಷಗಳ ಸಜೆ ಹಾಗೂ 15,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.