ಉಪ್ಪಿನಂಗಡಿ: ಮದ್ಯ ವ್ಯಸನಿಯೋರ್ವ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಚೂರಿ ಇರಿದ ಆರೋಪಿಯನ್ನು ಮೂಲತಃ ಸಕಲೇಶಪುರದ ನಿವಾಸಿ ಪ್ರಸಕ್ತ ಪುತ್ತೂರಿನಲ್ಲಿ ವಾಸ್ತವ್ಯವನ್ನು ಹೊಂದಿರುವ ವೆಂಕಟೇಶ್ ಎನ್ನಲಾಗಿದೆ.
ಇರಿತಕ್ಕೊಳಗಾದ ಮಹಿಳೆಯನ್ನು ಜಯಶ್ರೀ ಎಂದು ಗುರುತಿಸಲಾಗಿದೆ.
ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುವವನೆನ್ನಲಾಗಿದ್ದು, ಮದ್ಯ ಸೇವಿಸಿದಾಗಲೆಲ್ಲಾ ವಿಚಿತ್ರ ವರ್ತನೆ ತೋರುತ್ತಿದ್ದನೆನ್ನಲಾಗಿದೆ. ಅಂತೆಯೇ ಶನಿವಾರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಜಯಶ್ರೀ ಎಂಬ ಮಹಿಳೆಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದು, ಕೂಡಲೇ ಸ್ಥಳೀಯರು ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ದೂರು ದಾಖಲಿಸಲು ನಿರಾಕರಣೆ…!!
ಇರಿತಕ್ಕೊಳಗಾದ ಮಹಿಳೆ ಕೇಸ್ ದಾಖಲಿಸಲು ನಿರಾಕರಿಸಿದ್ದು, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.