ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ದ.ಕ – ಉಡುಪಿ ಕ್ಷೇತ್ರ ಕ್ಷೇತ್ರ ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗಬೇಕಾಗಿದ್ದು, ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವರು ಮತ್ತೆ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾದಂತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್‌ನಿಂದ ಇನ್ನು ಅಭ್ಯರ್ಥಿಗಳು ಅಂತಿಮವಾದಂತಿಲ್ಲ. ಕಾಂಗ್ರೆಸ್ ಅಭ್ಯರ್ಥಿತನ ಬಯಸಿ ಐವನ್ ಡಿಸೋಜಾ, ಕಾವು ಹೇಮನಾಥ ಶೆಟ್ಟಿ, ಶ್ಯಾಮಲಾ ಭಂಡಾರಿ, ಮಂಜುನಾಥ ಭಂಡಾರಿ, ಶಶಿಧರ್ ಹೆಗ್ಡೆ, ಪಿ ವಿ ಮೋಹನ್ ಸೇರಿದಂತೆ 11 ಮಂದಿ ಮುಂಚೂಣಿಯಲ್ಲಿದ್ದು, ಈ ನಡುವೆ ಹಾಲಿ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಅವರು ಸ್ಪರ್ಧಾಕಾಂಕ್ಷಿಯಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
ಈ ನಡುವೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಮಾಡಿರುವುದು ಜಿಲ್ಲೆಯ ರಾಜಕೀಯ ರಂಗದಲ್ಲಿ ಸಂಚಲನ ಮೂಡಲು ಕಾರಣವಾಗಿದೆ. ದ.ಕ.ದಲ್ಲಿ 3,397 ಹಾಗೂ ಉಡುಪಿ ಜಿಲ್ಲೆಯಲ್ಲಿ 2,517 ಹೀಗೆ ಒಟ್ಟು 5,914 ಮತದಾರರು ಇದ್ದು, ಈ ಪೈಕಿ ಸುಮಾರು 3,500 ಮಂದಿ ಬಿಜೆಪಿ ಹಾಗೂ 2,100 ಮಂದಿ ಕಾಂಗ್ರೆಸ್‌ನವರು ಎಂದು ಅಂದಾಜಿಸಲಾಗಿದೆ. ಜೆಡಿಎಸ್ ಬೆಂಬಲಿಗರು, ಎಸ್‌ಡಿಪಿಐ, ಪಕ್ಷೇತರ ಹೀಗೆ ಸುಮಾರು 400-500 ಮಂದಿ ಇರಬಹುದು ಎಂದು ಹೇಳಲಾಗುತ್ತಿದೆ. ಓರ್ವ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯದಲ್ಲಿ ಜಯಗಳಿಸಬೇಕಾದರೆ 2,200 ಮಗತಳ ಅವಶ್ಯಕತೆಯಿದೆ.