ಆಲಂಕಾರು: ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಹಾಗೂ ಸವಾರ ಗಾಯಗೊಂಡ ಘಟನೆ ಶಾಂತಿ ಮೊಗರು ಸೇತುವೆ ಸಮೀಪ ನ. 15 ರಂದು ರಾತ್ರಿ ನಡೆದಿದೆ.
ಗಾಯಗೊಂಡ ಬೈಕ್ ಸವಾರ ನನ್ನು ಕಡಬ ತಾಲೂಕಿನ ಕಾಣಿಯೂರು ಸಮೀಪದ ನೂಜಿ ನಿವಾಸಿ ಮಹೇಶ್ ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಕುದ್ಮಾರ್ – ಆಲಂಕಾರನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಂತಿ ಮೊಗರು ಸೇತುವೆಯಿಂದ 300 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ನೂಜಿ ಮಹೇಶ್ ರವರು ತಮ್ಮ ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಅಲಂಗಾರಿನಿಂದ ತನ್ನ ಮನೆಗೆ ಬರುತ್ತಿರುವಾಗ ಅಪಘಾತ ನಡೆದ ಸ್ಥಳದಲ್ಲಿ ಯಾವುದೋ ಕಾರಣಕ್ಕೆ ಬೈಕ್ ನಿಲ್ಲಿಸಿದ್ದರು .
ಅದೇ ಮಾರ್ಗದಲ್ಲಿ ಅಲಂಕಾರಿನಿಂದ ಕುದ್ಮಾರ್ ಕಡೆಗೆ ಬರುತ್ತಿದ್ದ ಕಾರು ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಕ್ಕೆ ಉರುಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಇದನ್ನು ಗಮನಿಸಿಯೂ, ಕಾರು ಚಾಲಕ ನಿಲ್ಲಿಸಿ ಉಪಚರಿಸದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು ಆತನ ನಡವಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.